-ಶ್ರೀರಾಮ ಒಂದು ವರ್ಗಕ್ಕೆ ಸೀಮಿತವಾಗಬಾರದು
ಬಳ್ಳಾರಿ: ಉಪ ಮುಖ್ಯಮಂತ್ರಿಯ ಕನಸು ಕಾಣುತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಪಿಎ ಮಹೇಶ್ ಸಾವಿನ ಬಗ್ಗೆ ಸತ್ಯ ಹೇಳಲಿ ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರ ಕೊರೊನಾ ಸೋಂಕು ನಿಯಂತ್ರಣ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದಿದೆ. ಈ ಹಿಂದೆ ನಮ್ಮ ಸಿದ್ದರಾಮಯ್ಯ ಸರ್ಕಾರ ಹತ್ತು ಪರ್ಸೆಂಟ್ ಸರ್ಕಾರವೆಂದು ಮೋದಿ ಅವರು ಹೇಳಿದ್ದರು. ಆಗ ಮೋದಿ ಮತ್ತು ಯಡಿಯೂರಪ್ಪ ಅವರಿಗೆ ನಾವು ನೋಟಿಸ್ ಕೊಟ್ಟಿದ್ದೀವಿ. ಅದಕ್ಕೆ ಉತ್ತರ ಈವರೆಗೂ ನೀಡಿಲ್ಲ. ಆದ್ರೆ ನಮಗೆ ನೋಟಿಸ್ ನೀಡಿದವರು ಅಧಿಕೃತ ವ್ಯಕ್ತಿಗಳಲ್ಲ ಎಂದು ರವಿಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ರು.
ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಅವರು ಉಪಮುಖ್ಯಮಂತ್ರಿ ಕನಸು ಕಾಣೋ ಶ್ರೀರಾಮುಲು ನೂರಾರು ಲೂಟಿ ಹೊಡೆದಿದ್ದಾರೆ. ಶ್ರೀರಾಮುಲು ಪಿಎ ಮಹೇಶ್ ಅಸಹಜವಾಗಿ ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ಕಾನೂನು ಬಾಹಿರವಾಗಿ ಅಂತ್ಯಸಂಸ್ಕಾರ ಮಾಡಿದ್ದರ ಬಗ್ಗೆ ರವಿಕೃಷ್ಣ ರೆಡ್ಡಿ ದೂರು ಕೊಟ್ಟಿದ್ದಾರೆ. ಮಹೇಶ್ ರೆಡ್ಡಿ ಐದು ಕೋಟಿ ಅವ್ಯವಹಾರ ಮಾಡಿದ್ದಾರೆ. ಅವರ ಸಾವಿನ ಬಗ್ಗೆ ಶ್ರೀರಾಮುಲು ಉತ್ತರ ಕೊಡಬೇಕಿದೆ. ಈ ಬಗ್ಗೆ ಕೇಳಿದ್ರೆ ರಾಮುಲು ಅವರು ಮೌನ ತಾಳಿದ್ದಾರೆ. ಅಂದ್ರೆ ಮೌನ ಸಮ್ಮತಿ ಲಕ್ಷಣ ಎಂದಿದ್ದಾರೆ.
ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡುತ್ತಿದ್ದಾರೆ. ಇದನ್ನು ನಾವು ಬೆಂಬಲಿಸುತ್ತೇವೆ. ಆದರೆ ರಾಮನ ಪರಿಕಲ್ಪನೆ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲ ವರ್ಗದ ಜನರಿಗೆ ಸೇರಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ.