ಬೆಂಗಳೂರು: ಸಿಎಂ ಬೊಮ್ಮಾಯಿ ಸಂಪುಟ ರಚನೆ ಜೊತೆಗೆ ಡಿಸಿಎಂ ಆಯ್ಕೆಯ ವಿಚಾರವೂ ಹೆಚ್ಚು ಸದ್ದು ಮಾಡುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಡಿಸಿಎಂಗಳಾಗಿದ್ದ ಅಶ್ವತ್ಥ್ ನಾರಾಯಾಣ್, ಲಕ್ಷ್ಮಣ್ ಸವದಿ ಮತ್ತು ಗೋವಿಂದ ಕಾರಜೋಳ ಮತ್ತೆ ಮುಂದುವರಿಯುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಈ ನಡುವೆ ಸಿಎಂ ಬೊಮ್ಮಾಯಿ ಮಾತ್ರ ಉಪ ಮುಖ್ಯಮಂತ್ರಿಗಳ ಆಯ್ಕೆಯ ಜವಬ್ದಾರಿಯನ್ನು ಬಿಜೆಪಿ ವರಿಷ್ಠರ ಹೆಗಲಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಡಿಸಿಎಂ ಆಯ್ಕೆಯನ್ನು ನೀವೇ ಮಾಡಿಕೊಳ್ಳಿ ಎಂದು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಮೂವರನ್ನು ಮುಂದುವರಿಸಬೇಕೋ ಅಥವಾ ಒಬ್ಬರಿಗೆ ಕೊಕ್ ನೀಡಿ ಹೊಸಬರಿಗೆ ಅವಕಾಶ ನೀಡಬೇಕೋ ಅಥವಾ ಮೂವರನ್ನ ಮುಂದುವರಿಸೋದರ ಜೊತೆ ಮತ್ತೊಬ್ಬರನ್ನು ಸೇರಿಸಿಕೊಳ್ಳುವ ಕುರಿತು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಡಿಸಿಎಂ ಆಯ್ಕೆ ಪ್ರಕ್ರಿಯೆಯಿಂದ ಹಿಂದೆ ಸರಿದಿರುವ ಬೊಮ್ಮಾಯಿ ಹೈಕಮಾಂಡ್ ಕೆಲ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇಂದು ಅಥವಾ ನಾಳೆ ಸಂಪುಟ ರಚನೆ: ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ ಸಲಹೆ: ಸದ್ಯ ಇರೋ ಮೂರು ಡಿಸಿಎಂ ಸ್ಥಾನಗಳನ್ನು ಮುಂದುವರಿಸಬಹುದು. ಒಕ್ಕಲಿಗ, ಎಸ್‍ಸಿ, ಲಿಂಗಾಯತ ಬದಲು ಒಕ್ಕಲಿಗ, ಎಸ್‍ಸಿ-ಎಸ್‍ಟಿಗೆ ಅವಕಾಶ ನೀಡಿ. ಗೋವಿಂದ ಕಾರಜೋಳ ಅವರನ್ನು ಮುಂದುವರಿಸಿ ಇಲ್ಲವಾದ್ರೆ ಅರವಿಂದ್ ಲಿಂಬಾವಳಿಗೆ ಆಯ್ಕೆ ಮಾಡಬಹುದು. ಒಕ್ಕಲಿಗ ಪೈಕಿ ಅಶ್ವತ್ಥ್ ನಾರಾಯಣ್, ಎಸ್‍ಟಿಯಿಂದ ಶ್ರೀರಾಮುಲುಗೆ ಅವಕಾಶ ನೀಡಬಹುದು ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಬಿಡಿಗಾಸಿನ ಪರಿಹಾರ – 2 ವರ್ಷದ ಹಿಂದೆ 10 ಸಾವಿರ, ಈಗ ಕೇವಲ 3,800 ರೂ.
ಹೈಕಮಾಂಡ್ ಲೆಕ್ಕಚಾರ ಏನು?
ನಾಲ್ಕು ಡಿಸಿಎಂ ಹುದ್ದೆಗಳನ್ನು ಸ್ಥಾಪಿಸಿ, ಒಕ್ಕಲಿಗ, ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ನಾಯಕರಿಗೆ ಅವಕಾಶ ನೀಡುವುದು. ಗೋವಿಂದ ಕಾರಜೋಳ ಅಥವಾ ಅರವಿಂದ್ ಲಿಂಬಾವಳಿಗೆ ಆಯ್ಕೆ ಮಾಡುವುದು. ಒಕ್ಕಲಿಗ ಪೈಕಿ ಅಶ್ವಥ್ ನಾರಾಯಣ್, ಎಸ್‍ಟಿಯಿಂದ ಶ್ರೀರಾಮುಲು ಮತ್ತು ಒಬಿಸಿಯಿಂದ ಸುನಿಲ್ ಕುಮಾರ್ ಕಾರ್ಕಳಗೆ ಅವಕಾಶ ಕೊಡುವ ಕುರಿತು ಹೈಕಮಾಂಡ್ ತೀರ್ಮಾನಿಸಿದ್ದು, ಇಂದಿನ ಸಭೆ ಬಳಿಕ ಅಂತಿಮ ತೀರ್ಮಾನವಾಗಲಿದೆ. ಲಕ್ಷ್ಮಣ ಸವದಿ ಅವರಿಗೆ ಕೊಕ್ ನೀಡುವ ಸಾಧ್ಯತೆಗಳು ಹೆಚ್ಚಿವೆ.