ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್‍ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿದೆ. ಆರೋಪಿಗಳಾದ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೋಹಂತಿ ಮತ್ತು ಎ.ಎಂ ಪ್ರಸಾದ್ ವಿಚಾರಣೆಗೆ ನೊಟೀಸ್ ನೀಡಿದೆ.
ಪ್ರಕರಣದಲ್ಲಿ ಕೆ.ಜೆ.ಜಾರ್ಜ್, ಪ್ರಣಬ್ ಮೋಹಂತಿ, ಎ.ಎಂ.ಪ್ರಸಾದ್ ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ ಎಂದು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನ ಪ್ರಶ್ನಿಸಿ ಮೃತ ಗಣಪತಿ ಪುತ್ರ ನೆಹಾಲ್ ಅರ್ಜಿ ಹಾಕಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ತ್ಯಾಜರಾಜ್ ಎನ್ ಇನವಳ್ಳಿ ಅವರು, ಆರೋಪಿಗಳ ವಿಚಾರಣೆಗೆ ನೋಟಿಸ್ ನೀಡಿದ್ದಾರೆ.
ಜಾರ್ಜ್ ಅವರು ನಮ್ಮ ತಂದೆಗೆ ಯಾವ ರೀತಿಯಲ್ಲಿ ಹಿಂಸೆ ನೀಡುತ್ತಿದ್ರು. ಸೂಸೈಡ್‍ಗೆ ಮುನ್ನ ಏನು ಮಾತಾನಾಡಿದ್ರು ಎಂಬ ಬಗ್ಗೆ ಸಿಬಿಐ ಮುಂದೆ ನಿಹಾಲ್ ಕೊಟ್ಟ ಹೇಳಿಕೆ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
2016ರ ಜುಲೈ 7ರಂದು ಮಂಗಳೂರು ಐಜಿ ಕಚೇರಿಯಲ್ಲಿ ಡಿವೈಎಸ್‍ಪಿ ಆಗಿದ್ದ ಗಣಪತಿ ಮಡಿಕೇರಿಯ ಲಾಡ್ಜ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಮಾಧ್ಯಮದ ಮುಂದೆ ಮಾತನಾಡಿದ್ದ ಗಣಪತಿ ಅವರು, ತನಗೆ ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್, ಪ್ರಣವ್ ಮೊಹಂತಿ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಕೆಲವೇ ತಿಂಗಳುಗಳಲ್ಲಿ ಸಿಐಡಿ ಮೂವರಿಗೂ ಕ್ಲೀನ್‍ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಗಣಪತಿ ಕುಟುಂಬ ಸುಪ್ರೀಂಕೋರ್ಟ್ ಮೊರೆ ಹೋಗಿ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿತ್ತು. 2017ರ ಸೆ. 5ರಂದು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು.