– ಮಹತ್ವದ ಮಾಹಿತಿ ಕಲೆ ಹಾಕಿದ ಎನ್‍ಐಎ
ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಲಿಕಾನ್ ಸಿಟಿಯ 32 ಕಡೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಏಕಕಾಲಕ್ಕೆ ದಾಳಿ ನಡೆಸಿದೆ.
ಎರಡು ದಿನಗಳ ಹಿಂದಷ್ಟೇ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಐಎ ಪ್ರಕರಣ ಕೈಗೆ ಎತ್ತಿಕೊಂಡಿದೆ. ಇದೀಗ ನಗರದ ಸುಮಾರು 32 ಕಡೆ ಏಕಕಾಲಕ್ಕೆ ದಾಳಿ ನಡೆಸಿದೆ. ಎನ್‍ಐಎ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಐಜಿ, ಡಿಐಜಿ, ಎಸ್‍ಪಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಇಂದು ಬೆಳಗ್ಗೆಯಿಂದ ದಾಳಿ ನಡೆಸಿ ತನಿಖೆ ನಡೆಸಲಾಗುತ್ತಿದ್ದು, ದಾಳಿ ವೇಳೆ ಎನ್‍ಐಎ ಮಹತ್ವದ ಮಾಹಿತಿ ಕಲೆ ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಈಗಾಗಲೇ ಹಲವು ಆರೋಪಿಗಳನ್ನು ಸಿಸಿಬಿ ಬಂಧಿಸಿದ್ದು, ಇದೀಗ ಭಯೋತ್ಪಾದಕರ ಜೊತೆ ನಂಟಿರುವ ಕುರಿತು ಎನ್‍ಐಎ ತನಿಖೆ ನಡೆಸುತ್ತಿದೆ.
ನಡೆದಿದ್ದೇನು?
ಶಾಸಕರ ಆಪ್ತ ನವೀನ್ ಎಂಬವರು ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ಆಗಸ್ಟ್ ೧೧ರಂದು ರಾತ್ರಿ 8ಕ್ಕೆ ಕಾವಲ್ ಭೈರಸಂದ್ರದಲ್ಲಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿತ್ತು. 100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಲು ಯತ್ನಿಸಿದ್ದರು. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು. ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಇತ್ತ ಗಲಭೆಗೂ ಮುನ್ನ ಶಾಸಕರು ಮನೆ ಖಾಲಿ ಮಾಡಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನೆ ಸಂಬಂಧಿಸದಂತೆ ಈಗಾಗಲೇ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.