ಚಿಕ್ಕಬಳ್ಳಾಪುರ: ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ವಾಪಸಂದ್ರ ಸೇತುವೆ ಬಳಿ ನಡೆದಿದೆ.
ಮೃತ ಯುವಕನನ್ನು ಶಶಿಕುಮಾರ್(25) ಎಂದು ಗುರುತಿಸಲಾಗಿದೆ. ಈತ ಬಾಗೇಪಲ್ಲಿ ನಿವಾಸಿಯಾಗಿದ್ದಾನೆ. ಬಾಗೇಪಲ್ಲಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರ ಚಿಕ್ಕಬಳ್ಳಾಪುರ ನಗರದ ಕಡೆಗೆ ತಿರುವು ಪಡೆದುಕೊಳ್ಳುತ್ತಿದ್ದನು. ಈ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಆಗ ಬೈಕ್ ಸವಾರ ಟಿಪ್ಪರ್ ಲಾರಿ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದಾನೆ.
ಅಪಘಾತಕ್ಕೆ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಹಾಗೂ ರಾಷ್ಟ್ರೀಯ ಹೆದ್ದಾರಿ 07 ರಲ್ಲಿ ಟಿಪ್ಪರ್‍ಗಳ ಹಾವಳಿ ಅತಿಯಾಗಿದೆ. ಟಿಪ್ಪರ್ ಚಾಲಕರು ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ. ಹೀಗಾಗಿ ಸವಾರರು ಭಯದಿಂದಲೇ ವಾಹನಗಳನ್ನು ಚಾಲನೆ ಮಾಡುವಂತಾಗಿದೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.