ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಕೈ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜಕೀಯ ದುರುದ್ದೇಶದಿಂದ ಆದ ದಾಳಿಯಾಗಿದೆ. ರಾಜ್ಯ ಸರ್ಕಾರ ಯಾವಾಗಲೋ ಅನುಮತಿ ನೀಡಿತ್ತು. ಆದರೆ ಉಪ ಚುನಾವಣೆ ಬಂದಾಗಲೇ ದಾಳಿ ಮಾಡಲಾಗಿದೆ ಎಂದು ಗರಂ ಆಗಿದ್ದಾರೆ.
ಇಡಿ ಆಯ್ತು, ಸಿಬಿಐ, ಐಟಿ ಆಯ್ತು ಈಗ ಮತ್ತೆ ಸಿಬಿಐ ದಾಳಿ ಮಾಡಿದ್ದಾರೆ. ನಮ್ಮ ನಾಯಕರು ಸಮರ್ಥರು ಇದ್ದಾರೆ. ಅವರು ಹ್ಯಾಂಡಲ್ ಮಾಡುತ್ತಾರೆ. ಅಹ್ಮದ್ ಪಾಟೇಲ್‍ರ ಚುನಾವಣೆಯಲ್ಲೂ ದಾಳಿ ಮಾಡಿದರು. ಇದೀಗ ಮತ್ತೆ ದಾಳಿ ಮಾಡಿದ್ದಾರೆ ಎಂದು ಸಿಡಿಮಿಡಿಗೊಂಡರು.
ಸಿಬಿಐ ದಾಳಿ ಮಾಡಲು ಪೂರಕ ದಾಖಲೆಗಳು ಇದ್ದರೆ ಅವತ್ತೇ ದಾಳಿ ಮಾಡಬೇಕಿತ್ತು. ಒಂದು ವರ್ಷ ಇಲ್ಲದ ದಾಳಿ ಬೈ ಎಲೆಕ್ಷನ್ ಬಂದಾಗಲೇ ಮಾಡಿದ್ದು ಯಾಕೆ ಎಂದು ಲಕ್ಷ್ಮಿ ಪ್ರಶ್ನಿಸಿದ್ದಾರೆ. ಡಿಕೆಶಿಯನ್ನು ಕಟ್ಟಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಎಲ್ಲೆಲ್ಲಿ ಧ್ವನಿ ಎತ್ತುತ್ತಾರೆಯೋ, ಅವರನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಾ ಇದ್ದಾರೆ. ನಮ್ಮ ನಾಯಕರು ಸರ್ಮರ್ಥರು ಇದ್ದಾರೆ. ಅವರು ಕಾನೂನಿನಡಿಯಲ್ಲಿ ಹೋರಾಟ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಡಿಕೆ ಬ್ರದರ್ಸ್ ಗೆ ಶಾಕ್ ನೀಡಿದ್ದಾರೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಐವರು ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಬೆಂಗಳೂರಿನ ಸಿಬಿಐ ಕಚೇರಿಯಲ್ಲಿ ಎಫ್‍ಐಆರ್ ಕೂಡ ದಾಖಲಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.