ಮಡಿಕೇರಿ: ನಾನು ಪ್ರಮಾಣಿಕವಾಗಿದ್ದೇನೆ ಎಂದು ಮೊನ್ನೆಯಿಂದ ಹೇಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಲು ಇದೊಂದು ಸದಾವಕಾಶ. ಈಗ ಸಾಬೀತುಪಡಿಸಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಕೊಡಗು ಜಿಲ್ಲಾ ಕೋವಿಡ್ ನಿರ್ವಹಣೆ ಸಂಬಂಧ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ವೇಳೆ ಮಾತನಾಡಿದ ಸುಧಾಕರ್, ಡಿಕೆ ಶಿವಕುಮಾರ್ ಮನೆ ಸಿಬಿಐ ದಾಳಿ ನಡೆಸಿರುವುದು ಯಾವುದೇ ರಾಜಕೀಯ ಪ್ರೇರಿತ ದಾಳಿ ಅಲ್ಲ. ಬದಲಾಗಿ 2018-19 ರಲ್ಲಿ ಐಟಿ ಮತ್ತು ಇಡಿಗಳು ದಾಳಿ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದವು. ಅದರ ಮುಂದುವರಿದ ಭಾಗವಾಗಿ ಸಿಬಿಐ ದಾಳಿ ನಡೆಸಿದೆ ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯ ಪ್ರೇರಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಸಿಬಿಐ ದಾಖಲಿಸಿರುವ ಐಫ್‍ಐಆರ್ ನೋಡಿದ್ದೇನೆ. ಅದರಲ್ಲಿ ಭ್ರಷ್ಟಾಚಾರ ನಡೆಸಿರುವ ವಿವರವನ್ನು ಹಾಕಲಾಗಿದೆ. ಹೀಗಾಗಿ ಯಾವ ರಾಜಕೀಯ ಪ್ರೇರಣೆ ಇಲ್ಲ. ಶಿವಕುಮಾರ್ ಅವರು ಈಗ ಅವರ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.