ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ

Public TV
2 Min Read
modi meeting

ನವದೆಹಲಿ: ಕೇಂದ್ರ ಸರ್ಕಾರವು ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯ ಪ್ರಮಾಣವನ್ನು ಶೇ.140ಕ್ಕೆ  ಹೆಚ್ಚಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗದುಕೊಂಡಿದೆ.

ಡಿಎಪಿ ರಸಗೊಬ್ಬರ ದರ ಭಾರೀ ಏರಿಕೆ ಆಗಿದೆ ಎಂಬ ರೈತರ ಟೀಕೆಯ ಬೆನ್ನಲ್ಲೇ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಸಗೊಬ್ಬರ ದರ ನಿಯಂತ್ರಣ ಸಂಬಂಧ ಉನ್ನತ ಮಟ್ಟದ ಸಭೆ ನಡೆಯಿತು.

ಈ ಸಭೆಯ ಬಳಿಕ ಶೇ.140ಕ್ಕೆ ಸಬ್ಸಿಡಿಯ ಪ್ರಮಾಣವನ್ನು ಏರಿಸುವ ನಿರ್ಧಾರ ತೆಗೆದುಕೊಂಡಿದೆ. ಇಷ್ಟೊಂದು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ 14,775 ಕೋಟಿ ರೂ. ಹಣವನ್ನು ವಿನಿಯೋಗಿಸಲಿದೆ. ಸಬ್ಸಿಡಿ ಮೊತ್ತ ಒಂದೇ ಬಾರಿಗೆ ಈ ಪ್ರಮಾಣದಲ್ಲಿ ಯಾವತ್ತೂ ಏರಿಕೆಯಾಗಿಲ್ಲ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸದ್ಯ ಈಗ ಒಂದು ಚೀಲ ಡಿಎಪಿ ರಸಗೊಬ್ಬರಕ್ಕೆ 2,400 ರೂ. ದರವಿದೆ. ಈ ಮೊದಲು 500 ರೂ. ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಈಗ ಈ ಸಬ್ಸಿಡಿ ದರವನ್ನು 1,200 ರೂ.ಗೆ ಏರಿಸಲಾಗಿದ್ದು, ರೈತರು 1 ಚೀಲ ಡಿಎಪಿ ಗೊಬ್ಬರವನ್ನು 1,200 ರೂ. ದರದಲ್ಲಿ ಖರೀದಿಸಬಹುದಾಗಿದೆ.

agriculture farmers

ಅಂತರಾಷ್ಟ್ರೀಯ ಮಟ್ಟದಲ್ಲಿ ದರ ಏರಿಕೆ ಆಗಿದ್ದರೂ ರೈತರಿಗೆ ಹಳೆ ಬೆಲೆಯಲ್ಲಿ ರಸಗೊಬ್ಬರ ಸಿಗಬೇಕು ಎಂದು ನರೇಂದ್ರ ಮೋದಿ ಸಭೆಯಲ್ಲಿ ಒತ್ತಿ ಹೇಳಿದ್ದರಿಂದ ಈ ನಿರ್ಧಾರ ಪ್ರಕಟವಾಗಿದೆ.

ಕಳೆದ ವರ್ಷ ಒಂದು ಚೀಲ ಡಿಎಪಿ ದರಕ್ಕೆ ಕಂಪನಿಗಳು 1,700 ರೂ. ದರವನ್ನು ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ 500 ರೂ. ಸಬ್ಸಿಡಿ ನೀಡಿತ್ತು. ಹೀಗಾಗಿ ಒಂದು ಚೀಲ ಗೊಬ್ಬರವನ್ನು ರೈತರು 1,200 ರೂ. ದರದಲ್ಲಿ ಖರೀದಿಸುತ್ತಿದ್ದರು.

Agriculture loan

 

ಡಿಎಪಿಗೆ ಬಳಸಲಾಗುವ ಫಾಸ್ಪರಿಕ್ ಆಸಿಡ್, ಅಮೋನಿಯಾ ಇತ್ಯಾದಿಗಳ ಅಂತರರಾಷ್ಟ್ರೀಯ ಬೆಲೆಗಳು ಇತ್ತೀಚಿಗೆ ಶೇ.60 ರಿಂದ ಶೇ.70 ರಷ್ಟು ಏರಿಕೆ ಕಂಡಿದೆ. ಆದ್ದರಿಂದ ಒಂದು ಚೀಲ ಡಿಎಪಿಯ ನೈಜ ಬೆಲೆ ಈಗ 2,400 ರೂ.ಗೆ ಏರಿಕೆಯಾಗಿದೆ. 500 ರೂ.ಗಳ ಸಬ್ಸಿಡಿ ನೀಡಿದ್ದರೂ ಒಂದು ಪ್ಯಾಕ್ ಚೀಲದ ದರ 1,900 ರೂ. ಆಗುತ್ತಿತ್ತು. ಈಗ ಶೇ.140ರಷ್ಟು ಸಬ್ಸಿಡಿ ಏರಿಕೆ ಮಾಡಿದ್ದರಿಂದ ರೈತರು 1,200 ರೂ. ದರದಲ್ಲಿ ಗೊಬ್ಬರವನ್ನು ಖರೀದಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *