ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿ ಹೊಡೆದು 9 ಜನರಿಗೆ ಗಂಭೀರ ಗಾಯ ಹಾಗೂ 10 ಜನರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಬಳಿ ನಡೆದಿದೆ.
ಗ್ರಾಮದ ಉಡುಸುಲಮ್ಮ ದೇವಸ್ಥಾನ ಬಳಿಯಲ್ಲಿ ಟ್ರ್ಯಾಕ್ಟರ್ ಸ್ಟೇರಿಂಗ್ ಕಟ್ ಆದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 9 ಜನ ಮಹಿಳೆಯರನ್ನು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಸಣ್ಣ ಪುಟ್ಟ ಗಾಯಗಳಾದ 10 ಜನರು ಕಂಪ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ರಾಮಸಾಗರ ಗ್ರಾಮದಿಂದ ಕಣವಿತಿಮ್ಮಲಾಪುರ ಗ್ರಾಮದ ಹೊರವಲಯದಲ್ಲಿ ಮೆಣಸಿನಕಾಯಿ ಕಟಾವಿಗೆ ತೆರಳಲು ಗ್ರಾಮದಲ್ಲಿ ಕೂಲಿ ಕಾರ್ಮಿಕರಾದ ಮಹಿಳೆಯರನ್ನು ಟ್ರ್ಯಾಕ್ಟರ್‍ನಲ್ಲಿ ಕೂರಿಸಿಕೊಂಡು ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.