– ಮದುವೆಗೆ ತೆರಳುತ್ತಿದ್ದ ಮಿನಿ ಬಸ್
ಚಿಕ್ಕೋಡಿ/ಬೆಳಗಾವಿ: ಚಲಿಸುತ್ತಿದ್ದ ವಾಹನದ ಟೈರ್ ಒಡೆದ ಪರಿಣಾಮ ಮದುವೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಂಚನಾಳ ಕ್ರಾಸ್ ಬಳಿ ನಡೆದಿದೆ.
ಮಿನಿ ಬಸ್ ಪಲ್ಟಿ ಆದ ಪರಿಣಾಮ ಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೆ ಸಣ್ಣ ಪುಟ್ಟ ಗಾಯಗೊಂಡ ಗಾಯಾಳುಗಳಿಗೆ ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದಿಂದ ಹುಕ್ಕೇರಿ ಪಟ್ಟಣದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಜನರನ್ನ ಕರೆದು ತರುತ್ತಿದ್ದ ಮಿನಿ ಬಸ್ ಟೈರ್ ಒಡೆದಿದ್ದು, ಬಳಿಕ ನಿಯಂತ್ರಣ ಸಿಗದೆ ಬಸ್ ಪಲ್ಟಿಯಾಗಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.