ರಾಮನಗರ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಚನ್ನಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರ ಯಡವಟ್ಟು ಸಾರ್ವಜನಿಕರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಪರೀಕ್ಷೆ ಮಾಡಿಸದೇ ನಿಮಗೆ ಕೊರೊನಾ ಪಾಸಿಟಿವ್ ಇದೆ ಎಂದು ಹೇಳಿ ಜನರನ್ನು ಆತಂಕಕ್ಕೆ ದೂಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೇವಲ ಎರಡು ತಿಂಗಳಲ್ಲಿ ಸಾವಿರ ಗಡಿ ದಾಟಿದೆ. ಈ ಮಧ್ಯೆ ಚನ್ನಪಟ್ಟಣ ತಾಲೂಕು ಆಸ್ಪತ್ರೆ ವೈದ್ಯರು ಮಾಡಿರುವ ಯಡವಟ್ಟು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಚನ್ನಪಟ್ಟಣ ತಾಲೂಕಿನ ಮಂಡಿಪೇಟೆ ನಿವಾಸಿ ವೃದ್ಧ ಅಮೀರ್ ಜಾನ್ ಜುಲೈ 29ರಂದು ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋಗಿದ್ದಾರೆ. ಮೊದಲಿಗೆ ಮನೆ ವಿಳಾಸ, ಫೋನ್ ನಂಬರ್ ಕೊಟ್ಟು ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಟೆಸ್ಟಿಂಗ್ ಕಿಟ್ ನೀಡಿದ್ದಾರೆ.
Advertisement
Advertisement
ಈ ವೇಳೆ ಮನೆಯಿಂದ ಫೋನ್ ಕರೆ ಬಂದ ಕಾರಣ ಪರೀಕ್ಷೆ ಮಾಡಿಸಿಕೊಳ್ಳದೆ ಮನೆಗೆ ವಾಪಾಸ್ ಹೋಗಿದ್ದಾರೆ. ಆದರೆ ಆಗಸ್ಟ್ 3ರಂದು ಅವರ ಮೊಬೈಲ್ ನಂಬರ್‍ಗೆ ಕೊರೊನಾ ಪಾಸಿಟಿವ್ ಎಂದು ಸಂದೇಶ ಬಂದಿದೆ. ಅಲ್ಲದೆ ತಾಲೂಕು ಆಸ್ಪತ್ರೆಯಿಂದ ಸಹ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಕುಟುಂಬ, ನಾವು ಪರೀಕ್ಷೆ ಮಾಡಿಸಿಕೊಳ್ಳದೇ ಹೇಗೆ ಪಾಸಿಟಿವ್ ವರದಿ ಬರಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಜುಲೈ 29ರಂದು 33 ಜನರ ಸ್ಯಾಂಪಲ್ ಪಡೆದಿರುವುದಾಗಿ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ. ಆದರೆ ಆಸ್ಪತ್ರೆಯವರು ನೀಡಿದ್ದ ಟೆಸ್ಟ್ ಕಿಟ್‍ನ್ನು ಲ್ಯಾಬ್‍ಗೆ ಕಳುಹಿಸದೇ ವರದಿ ಬರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತಿದೆ. ಆ ಟೆಸ್ಟ್ ಕಿಟ್ ಬೇರೆ ಎಲ್ಲೂ ಸಿಗುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತದೆ. ಅಲ್ಲದೆ ಅದರ ಮೇಲೆ ವ್ಯಕ್ತಿಯ ಹೆಸರು ನಮೂದಿಸಲಾಗಿದೆ. ಹೀಗಿದ್ದಾಗ ಟೆಸ್ಟ್‍ಗೆ ಕಳುಹಿಸದೇ ಪಾಸಿಟಿವ್ ವರದಿ ಬರಲು ಹೇಗೆ ಸಾಧ್ಯ ಎಂಬ ಅನುಮಾನ ಮೂಡಿದೆ.
Advertisement
ಇಷ್ಟೆಲ್ಲ ಗೊಂದಲಗಳು ಮೂಡಿದ ಮೇಲೆ ಅಮೀರ್ ಜಾನ್‍ಗೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗಿದೆ. ಈ ವರದಿಯಲ್ಲೂ ನೆಗೆಟಿವ್ ಎಂದು ಬಂದಿದೆ. ಈ ಬಗ್ಗೆ ತಾಲೂಕು ಆಸ್ಪತ್ರೆ ಸರ್ಜನ್ ಅವರನ್ನ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ತಾಲೂಕು ಆಸ್ಪತ್ರೆ ವೈದ್ಯರು ಮಾಡುತ್ತಿರುವ ಯಡವಟ್ಟಿನಿಂದ ಜನ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದಾರೆ.