– ಇಸ್ಕಾನ್‍ನ ಅಕ್ಷಯ ಪಾತ್ರೆಯಿಂದ ಕಾರ್ಮಿಕರಿಗೆ ಆಹಾರ
ಬೆಂಗಳೂರು: ಕೊರೊನಾ ಟೆಸ್ಟಿಂಗ್ ಪ್ರಮಾಣ ಕಡಿಮೆಯಾಗಿಲ್ಲ, ಟೆಸ್ಟ್ ಮಾಡುವ ವಿಧಾನ ಬದಲಾಗಿದೆ ಅಷ್ಟೆ ಎಂದು ಹೇಳುವ ಮೂಲಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟೆಸ್ಟಿಂಗ್ ಕಡಿಮೆಯಾಗಿರುವುದನ್ನು ಒಪ್ಪಿಕೊಳ್ಳದೆ, ಸಮರ್ಥಿಸಿಕೊಂಡಿದ್ದಾರೆ.
ಇಂದು ಕೆ.ಆರ್.ಮಾರ್ಕೆಟ್‍ನಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯಿಂದ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ಪೂರೈಕೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಟೆಸ್ಟಿಂಗ್ ಕಡಿಮೆಯಾಗಿದ್ದಕ್ಕೆ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂಬ ಚರ್ಚೆ ನಡೆಯುತ್ತಿರುವ ಬಗ್ಗೆ ಸ್ಪಷ್ಟಪಡಿಸಿದರು. ಟೆಸ್ಟಿಂಗ್ ಪ್ರಮಾಣ ಕಡಿಮೆಯಾಗಿಲ್ಲ, ಟೆಸ್ಟ್ ಮಾಡುವ ವಿಧಾನ ಬದಲಾಗಿದೆ. ಪಾಸಿಟಿವ್ ಬಂದವರ ಕಟುಂಬ ಹಾಗೂ ಸುತ್ತಮುತ್ತಲಿನವರ ಟೆಸ್ಟ್ ನಡೆಯುತ್ತಿದೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡುತ್ತಿಲ್ಲ. ಹೀಗಾಗಿ ಸಂಖ್ಯೆ ಕಡಿಮೆ ಆಗಿರಬಹುದು ಎಂದರು.
ಲಾಕ್‍ಡೌನ್ ಮುಂದುವರಿಕೆ ಬಗ್ಗೆ ಸಿಎಂ ಮಟ್ಟದಲ್ಲಿ ಇನ್ನು ಚರ್ಚೆ ನಡೆದಿಲ್ಲ. ಸಿಎಂ ಅಂಕಿ, ಅಂಶ ಪಡೆಯುತ್ತಿದ್ದಾರೆ. ಇಂದು ಟಾಸ್ಕ್ ಫೋರ್ಸ್ ಸಭೆ ನಡೆಯುತ್ತಿದೆ. ಏನು ತೀರ್ಮಾನ ಆಗುತ್ತೆ ಅನ್ನೋದು ನೋಡಬೇಕು. ಟಾಸ್ಕ್ ಫೋರ್ಸ್ ಸಭೆಯ ತೀರ್ಮಾನದ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಇದೇ ವೇಳೆ ತಿಳಿಸಿದರು.
ಅಕ್ಷಯಪಾತ್ರೆಯಿಂದ ಆಹಾರ
ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯಿಂದ ಕೂಲಿ ಕಾರ್ಮಿಕರು ಹಾಗೂ ಬರವಡಿಗೆ ಆಹಾರ ಪೂರೈಕೆ ಮಾಡುವ ಕಾರ್ಯಕ್ರಮಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇಂದು ಕೆ.ಆರ್.ಮಾರ್ಕೆಟ್‍ನಲ್ಲಿ ಚಾಲನೆ ನೀಡಿದರು. ಕೂಲಿ ಕಾರ್ಮಿಕರಿಗೆ ಆಹಾರ ಪೂರೈಕೆ ಕಾರ್ಯಕ್ರಮ ಇಂದಿನಿಂದ ಆರಂಭವಾಗಲಿದ್ದು, ಫುಡ್ ರಿಲೀಫ್ ಸೆಂಟರ್ ಕಾರ್ಯನಿರ್ವಹಿಸಲಿದೆ. ಕಾರ್ಯಕ್ರಮದಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಆಯುಕ್ತ ಕಮಲ್‍ಪಂತ್ ಉಪಸ್ಥಿತರಿದ್ದರು.