-ಸ್ಟೆಪ್‍ಡೌನ್ ವ್ಯವಸ್ಥೆಯನ್ನು ಅವಲೋಕನ ಮಾಡಿದ ಡಾ.ಅಶ್ವತ್ಥನಾರಾಯಣ
ಬೆಂಗಳೂರು: ಕೋವಿಡ್ ಹೋಮ್ ಐಸೋಲೇಷನ್ ವ್ಯವಸ್ಥೆಯಲ್ಲಿ ಟೆಲಿಕನ್ಸಲ್‍ಟೆನ್ಸಿ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಸ್ಟೆಪ್‍ಡೌನ್ ವ್ಯವಸ್ಥೆಯನ್ನು ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವಲೋಕನ ಮಾಡಿದರು.
ಇದೇ ವೇಳೆ ಟೆಲಿಕನ್ಸಲ್‍ಟೆನ್ಸಿ ಮೂಲಕ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಾರದ, ಸೇವಾ ಮನೋಭಾವ ಮರೆತ ವೈದ್ಯಕೀಯ ವಿದ್ಯಾರ್ಥಿಗಳ ವರ್ತನೆಗೆ ಡಿಸಿಎಂ ಅತೀವ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ವರ್ಚುಯಲ್ ವೇದಿಕೆ ಮೂಲಕ ಸ್ಟೆಪ್‍ಡೌನ್ ವ್ಯವಸ್ಥೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮೊದಲ ಅಲೆ ಬಂದಾಗ ತೀವ್ರ ಆಕ್ಷೇಪಕ್ಕೆ ಗುರಿಯಾಗಿದ್ದ ಆತಂಕಕ್ಕೂ ಕಾರಣವಾಗಿದ್ದ ಹೋಮ್ ಐಸೋಲೇಷನ್ ವ್ಯವಸ್ಥೆ ಎರಡನೇ ಅಲೆಯ ಹೊತ್ತಿಗೆ ಆಪ್ತರಕ್ಷಕನಂತೆ ಬದಲಾಗಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಮಾರು 10,000ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಹಾಗೂ 800ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಮನಸಾರೆ ಅಭಿನಂದಿಸುವೆ ಎಂದರು.
ವೈದ್ಯ ಸೇವೆ ಎಂದರೆ ಸಂಕಷ್ಟ ಕಾಲದಲ್ಲಿ ಜನರ ಸೇವೆಗೆ ಧಾವಿಸುವುದೇ ಹೊರತು ಪಲಾಯನ ಮಾಡುವುದಲ್ಲ. ಕೋವಿಡ್ ಸೋಂಕಿತರಿಗೆ ಟೆಲಿಕನ್ಸಲ್‍ಟೆನ್ಸಿ ಮೂಲಕ ಸ್ಟೆಪ್‍ಡೌನ್ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಅಂತಿಮ ವರ್ಷದ ಎಲ್ಲ ವೈದ್ಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವಂತೆ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರನ್ನು ಕೋರಲಾಗಿತ್ತು. ಆದರೆ, ಕಡಿಮೆ ಪ್ರಮಾಣದ ವಿದ್ಯಾರ್ಥಿಗಳು ಬಂದು ಕೆಲಸ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಹೊರಗೆ ಉಳಿದಿದ್ದಾರೆ. ಇದು ಬೇಸರದ ಸಂಗತಿ ಎಂದು ಹೇಳಿದರು.
ಕೇವಲ ಸೋಂಕಿತರಿಗೆ ಕರೆ ಮಾಡಿ ವೈದ್ಯಕೀಯ ಸಲಹೆ ನೀಡಲು ಹಿಂದೆ-ಮುಂದೆ ನೋಡುತ್ತಿರುವ ವಿದ್ಯಾರ್ಥಿಗಳು ಸಮಾಜಕ್ಕೆ ಯಾವ ಸಂದೇಶ ನೀಡಲಿದ್ದಾರೆ. ನಮ್ಮ ಭವಿಷ್ಯದ ಕಥೆ ಏನು? ಎಂದು ಬೇಸರ ವ್ಯಕ್ತಪಡಿಸಿದರು.
ಹೋಮ್ ಐಸೋಲೇಷನ್ ಅತಿದೊಡ್ಡ ಪರಿಹಾರ: ಕೋವಿಡ್ ಸಂದರ್ಭದಲ್ಲಿ ಹೋಮ್ ಐಸೋಲೇಷನ್ ಎನ್ನುವುದು ಅತಿದೊಡ್ಡ ಪರಿಹಾರವಾಗಿದೆ. ಬೆಂಗಳೂರಿನಂಥ ನಗರದಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ಕರೆತಂದು ನಿರ್ವಹಣೆ ಮಾಡೋದು ಬಹಳ ಕಷ್ಟ ಎಂದ ಡಿಸಿಎಂ, ಈ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರು.
ಎರಡನೇ ಅಲೆ ಬಂದ ಮೇಲೆ ಈವರೆಗೆ 3.6 ಲಕ್ಷ ಜನ ಸೋಂಕಿತರಿಗೆ ಸೇವೆ ಒದಗಿಸಲಾಗಿದೆ. ಇದುವರೆಗೆ 6 ಲಕ್ಷ ಮ್ಯಾನುಯಲ್ ಕಾಲ್‍ಗಳನ್ನು ಮಾಡಲಾಗಿದೆ. 5 ಲಕ್ಷಕ್ಕೂ ಹೆಚ್ಚು ಎಸ್ ಎಂಎಸ್ ಸಂದೇಶಗಳ ಮೂಲಕ ವೈದ್ಯಕೀಯ ಸಲಹೆ ನೀಡಲಾಗಿದೆ. 8,000 ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ರೆಫರ್ ಮಾಡಲಾಗಿದ್ದು, 4,700 ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳಿಸಲಾಗಿದೆ. ಇನ್ನು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ 1,000ಕ್ಕೂ ಹೆಚ್ಚು ಸೋಂಕಿತರನ್ನು ತಕ್ಷಣವೇ ಆಂಬುಲೆನ್ಸ್ ವ್ಯವಸ್ಥೆ ಮಾಡಿ ತುರ್ತಾಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಈ ನೆಟ್‍ವರ್ಕ್‍ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳ ಜತೆಗೆ 800ಕ್ಕೂ ಹೆಚ್ಚು ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೈದ್ಯಕೀಯ ಮಾನವ ಸಂಪನ್ಮೂಲ ಹಾಗೂ ತಂತ್ರಜ್ಞಾನವನ್ನು ಒಟ್ಟಾಗಿಸಿಕೊಂಡು ಈ ಕೆಲಸ ಮಾಡಲಾಗುತ್ತಿದೆ. ಅನೇಕ ಜೀವಗಳನ್ನು ಉಳಿಸಿದ ತೃಪ್ತಿ ಸರಕಾರಕ್ಕಿದೆ. ಇದರ ಶ್ರೇಯಸ್ಸು ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳೂ ಉಳಿದೆಲ್ಲರಿಗೂ ಸಲ್ಲುತ್ತದೆ ಎಂದರು.
ಮೊದಲ ಅಲೆ ಬಂದಾಗ ಹೋಮ್ ಐಸೋಲೇಷನ್‍ಗೆ ಅವಕಾಶ ಕೊಡಬೇಕೋ ಬೇಡವೋ ಎಂಬ ಗೊಂದಲವಿತ್ತು. ಅದಕ್ಕೆ ಆಕ್ಷೇಪವೂ ಇತ್ತು. ಎರಡನೇ ಅಲೆಯಲ್ಲಿ ಈ ವ್ಯವಸ್ಥೆ ಅತ್ಯುತ್ತವಾಗಿ ಕೆಲಸ ಮಾಡಿದೆ. ಸ್ಟೆಪ್ ಒನ್ ಅನ್ನುವ ಸಂಸ್ಥೆ ಮುಂದೆ ಬಂದು ಇಡೀ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ರೂಪಿಸಿದೆ ಎಂದು ನುಡಿದರು.
ಹಳ್ಳಿ ಕಡೆ ಹೋಮ್ ಐಸೋಲೇಷನ್ ಇಲ್ಲ: ಗ್ರಾಮೀಣ ಭಾಗದಲ್ಲಿ ಈಗ ಹೋಮ್ ಐಸೋಲೇಷನ್ ವ್ಯವಸ್ಥೆಯನ್ನೂ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಎಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ಕೋವಿಡ್ ಕೇರ್ ಸೆಂಟರ್‍ಗಳನ್ನು ಮಾಡಲಾಗಿದೆ. ಕೋವಿಡ್ ನಿರ್ವಹಣೆ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡಿ ತಾಲೂಕು ಮಟ್ಟದಲ್ಲಿಯೇ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯ ಸನಿಹದಲ್ಲಿ ಅಥವಾ ಅವರ ತಾಲೂಕಿನಲ್ಲಿಯೇ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವರ್ಚುಯಲ್ ಸಭೆಯಲ್ಲಿ ಹೋಮ್ ಹೈಸೋಲೇಷನ್ ಉಸ್ತುವಾರಿ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ಸ್ಟೆಪ್‍ಡೌನ್ ವ್ಯವಸ್ಥೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿರುವ 10 ವೈದ್ಯರು ಮತ್ತು 10 ವೈದ್ಯ ವಿದ್ಯಾರ್ಥಿಗಳ ಹೆಸರುಗಳನ್ನು ಓದಿದರು. ಅವರ ಸೇವೆಯನ್ನು ಡಿಸಿಎಂ ಶ್ಲಾಘಿಸಿದರು.