ಲಕ್ನೋ: ಆಧುನಿಕ ಜಗತ್ತಿನಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಡುವುದು ಸಾಮಾನ್ಯವಾಗಿದೆ. ಆದರೆ ಕೆಲವೆಡೆಗಳಲ್ಲಿ ಇನ್ನೂ ಜನರು ಇದನ್ನು ವಿರೋಧಿಸುತ್ತಾರೆ. ಇದೀಗ ಜೀನ್ಸ್, ಟಿ- ಶರ್ಟ್ ಧರಿಸಿದಳೆಂದು ಹುಡುಗಿಯೊಬ್ಬಳನ್ನು ಕೊಲೆಗೈದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಮೃತಳನ್ನು ನೇಹಾ (16) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ದೇವಾರಿಯಾ ಪ್ರದೇಶದಲ್ಲಿ ನಡೆದಿದೆ. ಈಕೆ ವಿದ್ಯಾಭ್ಯಾಸ ಹಿನ್ನೆಲೆಯಲ್ಲಿ ಲೂಧಿಯಾನದಲ್ಲಿ ನೆಲೆಸಿದ್ದಳು. ಹೀಗಾಗಿ ಅಲ್ಲಿ ಎಲ್ಲರಂತೆ ನೇಹಾ ಕೂಡ ಜೀನ್ಸ್, ಟೀ ಶರ್ಟ್ ಧರಿಸುತ್ತಿದ್ದಳು.
ಲೂಧಿಯಾನದಲ್ಲಿ ಧರಿಸಿ ಅಭ್ಯಾಸವಿದ್ದ ನೇಹಾ ತಮ್ಮ ಮನೆಗೆ ಬಂದ ಸಂದರ್ಭದಲ್ಲಿಯೂ ಜೀನ್ಸ್, ಟೀ ಶರ್ಟ್ ಹಾಕಿದ್ದಾಳೆ. ಈ ವೇಳೆ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡ ಎಂದು ನೇಹಾ ಚಿಕ್ಕಪ್ಪ ಹಾಗೂ ಅಜ್ಜ ವಾರ್ನ್ ಮಾಡಿದ್ದಾರೆ. ಈ ವಿಚಾರದಲ್ಲಿ ಮನೆಯಲ್ಲಿ ಗದ್ದಲವೇ ನಡೆದಿದೆ.
ಜಗಳವಾಗಿ ಕೆಲ ಹೊತ್ತಿನ ಬಳಿಕ ಊರ ಹೊರಗೆ ಸೇತುವೆಯ ಬಳಿ ನೇಣು ಬಿಗಿದುಕೊಂಡ ರೀತಿಯಲ್ಲಿ ನೇಹಾ ಶವವವಾಗಿ ಪತ್ತೆಯಾಗಿದ್ದಾಳೆ. ಹುಡುಗಿ ಶವ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯಾರೋ ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇತ್ತ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮಗಳನ್ನು ಚಿಕ್ಕಪ್ಪ ಹಾಗೂ ಆಕೆಯ ಅಜ್ಜ ಸೇರಿ ಕೊಲೆ ಮಾಡಿದ್ದಾರೆ. ಬಳಿಕ ಅವರೇ ಮಗಳ ಶವವನ್ನು ಇಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ
ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.