ಟೀಂ ಇಂಡಿಯಾದಲ್ಲಿ ಆಡದಿದ್ರೂ ಐಪಿಎಲ್‍ನಲ್ಲಿ ಸಾಧನೆಗೈದ ಆಟಗಾರರು

Public TV
2 Min Read
ipl 2020 trophy 1

ನವದೆಹಲಿ: ಐಪಿಎಲ್‍ನಲ್ಲಿ ಉತ್ತಮ ಸಾಧನೆ ಮಾಡಿದರು ಕೆಲ ಆಟಗಾರರು ಇನ್ನೂ ಟೀಂ ಇಂಡಿಯಾಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ಆದರೆ ಐಪಿಎಲ್‍ನಲ್ಲಿ ಮಾತ್ರ ಉತ್ತಮವಾಗಿ ಆಡಿಕೊಂಡು ಬರುತ್ತಿದ್ದಾರೆ.

ಈ ಪಟ್ಟಿಯಲ್ಲಿ ನಮಗೆ ಮೊದಲು ಸಿಗುವುದು ಮುಂಬೈ ಇಂಡಿಯನ್ಸ್ ತಂಡ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಕಿಂಗ್ಸ್ ಇಲೆವೆನ್ ತಂಡದ ಸಂದೀಪ್ ಶರ್ಮಾ, ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ಮತ್ತು ಶ್ರೇಯಸ್ ಗೋಪಾಲ್. ಈ ಎಲ್ಲರೂ ಉತ್ತಮವಾಗಿ ಆಡಿದರೂ ಕೂಡ ಟೀಂ ಇಂಡಿಯಾಗೆ ಸೆಲೆಕ್ಟ್ ಆಗುವಲ್ಲಿ ವಿಫಲರಾಗಿದ್ದಾರೆ.

Suryakumar Yadav 1

ಸೂರ್ಯ ಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಯಾದವ್ ಓರ್ವ ಉತ್ತಮ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ 101 ಪಂದ್ಯಗಳನ್ನು ಆಡಿರುವ ಸೂರ್ಯ 11 ಅರ್ಧಶತಕದ ಸಹಾಯದಿಂದ 2,024 ರನ್ ಸಿಡಿಸಿದ್ದಾರೆ. ಐಪಿಎಲ್-2020ರಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಸೂರ್ಯ, 16 ಪಂದ್ಯಗಳಲ್ಲಿ 480 ರನ್ ಸಿಡಿಸಿ ಮಿಂಚಿದರು. ಜೊತೆಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗದ ಕಾರಣಕ್ಕೆ ವಿವಾದವನ್ನು ಮಾಡಿಕೊಂಡಿದ್ದರು.

Ishan Kishan

ಇಶಾನ್ ಕಿಶನ್: 22 ವರ್ಷದ ಈ ಮುಂಬೈ ಇಂಡಿಯನ್ಸ್ ಆಟಗಾರ ಈ ಬಾರಿಯ ಐಪಿಎಲ್‍ನಲ್ಲಿ ಭರ್ಜರಿ ಫಾರ್ಮ್‍ನಲ್ಲಿದ್ದರು. ತಮಗೆ ನೀಡಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಿಶನ್ 14 ಪಂದ್ಯಗಳನ್ನಾಡಿ ನಾಲ್ಕು ಅರ್ಧಶತಕದ ಜೊತೆಗೆ 516 ರನ್‍ಗಳಿಸಿದರು. ಇದರ ಜೊತೆಗೆ ಈ ಬಾರಿಯ ಐಪಿಎಲ್‍ನಲ್ಲಿ 30 ಸಿಕ್ಸ್ ಸಿಡಿಸಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು. ದೊಡ್ಡ ಹೊಡೆತಗಳನ್ನು ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದರು.

Sandeep Sharma 1

ಸಂದೀಪ್ ಶರ್ಮಾ: ಐಪಿಎಲ್ ಟೂರ್ನಿಯಲ್ಲಿ ಸಂದೀಪ್ ಶರ್ಮಾ ಬುಮ್ರಾ ಅವರಷ್ಟೇ ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಸಂದೀಪ್ ಇನ್ನು ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ. ಪವರ್ ಪ್ಲೇನಲ್ಲಿ ಸೂಪರ್ ಆಗಿ ಬೌಲ್ ಮಾಡುವ ಶರ್ಮಾ ಪವರ್ ಪ್ಲೇನಲ್ಲಿ 53 ವಿಕೆಟ್ ಪಡೆದು ಮೊದಲ ಆರು ಓವರಿನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿರುವ ಆಟಗಾರ ಎನಿಸಿಕೊಂಡಿದ್ದಾರೆ. ಜೊತೆಗೆ ಐಪಿಎಲ್-2020ಯಲ್ಲಿ 13 ಪಂದ್ಯಗಳನ್ನಾಡಿ 14 ವಿಕೆಟ್ ಪಡೆದು ಮಿಂಚಿದರು.

rahul tewatia

ರಾಹುಲ್ ತೆವಾಟಿಯಾ: ಈ ಬಾರಿಯ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ತನ್ನ ಅಬ್ಬರ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದರು. ಜೊತೆಗೆ ಡೆತ್ ಓವರಿನಲ್ಲಿ ಒಳ್ಳೆಯ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸಿ ಕ್ರೀಡಾಭಿಮಾನಿಗಳನ್ನು ಇಂಪ್ರೆಸ್ ಮಾಡಿದರು. ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ 14 ಪಂದ್ಯಗಳನ್ನಾಡಿದ ರಾಹುಲ್ 255 ರನ್ ಸಿಡಿಸಿ 10 ವಿಕೆಟ್ ಪಡೆದು ಮಿಂಚಿದರು. ಇವರ ಜೊತೆಗೆ ರಾಜಸ್ಥಾನ್ ತಂಡ ಶ್ರೇಯಸ್ ಗೋಪಾಲ್ ಸತತ ಎರಡು ಅವೃತ್ತಿಯಲ್ಲೂ 10 ವಿಕೆಟ್ ಪಡೆದರೂ ಟೀಂ ಇಂಡಿಯಾಗೆ ಆಯ್ಕೆಯಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *