ಟೀಂ ಇಂಡಿಯಾಗೆ ಸೆಲೆಕ್ಟ್‌ ಆಗದೇ ಇದ್ರೂ 2 ಸಾವಿರ ರನ್‌ ಪೂರ್ಣ- ಸೂರ್ಯಕುಮಾರ್‌ ಸಾಧನೆ

Public TV
2 Min Read
Suryakumar Yadav 2

ದುಬೈ: ಕೆಲ ದಿನಗಳಿಂದ ಸುದ್ದಿಯಲ್ಲಿರುವ ಮುಂಬೈ ಇಂಡಿಯನ್ಸ್‌ ತಂಡದ ಪ್ರತಿಭಾನ್ವಿತ ಬಲಗೈ ಆಟಗಾರ 30 ವರ್ಷದ ಸೂರ್ಯಕುಮಾರ್‌ ಯಾದವ್‌ ಈಗ ಐಪಿಎಲ್‌ನಲ್ಲಿ ವೈಯಕ್ತಿಕವಾಗಿ ವಿಶೇಷ ಸಾಧನೆ ಮಾಡಿದ್ದಾರೆ.

2012ರಿಂದ ಆರಂಭಗೊಂಡು ಇಲ್ಲಿಯವರೆಗೆ 100 ಪಂದ್ಯ ಆಡಿರುವ ಸೂರ್ಯಕುಮಾರ್‌ ಯಾದವ್‌ ಐಪಿಎಲ್‌ನಲ್ಲಿ 2000 ರನ್‌ ಪೂರ್ಣಗೊಳಿಸಿದ್ದಾರೆ. ಹೀಗಿದ್ದರೂ ಇಲ್ಲಿಯವರೆಗೆ ಭಾರತ ತಂಡಕ್ಕೆ ಆಯ್ಕೆ ಆಗಿಲ್ಲ. ಈ ಮೂಲಕ ಟೀಂ ಇಂಡಿಯಾದ ಕ್ಯಾಪ್‌ ಧರಿಸದೇ ಅಂತಾರಾಷ್ಟ್ರೀಯ ಪಂದ್ಯ ಆಡದೇ ಇದ್ದರೂ ಐಪಿಎಲ್‌ನಲ್ಲಿ 2000 ರನ್‌ ಪೂರ್ಣಗೊಳಿಸಿರುವ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಸಾಧನೆಯ ಮೂಲಕ ಸೂರ್ಯಕುಮಾರ್‌ ಯಾದವ್‌ ತಾನೊಬ್ಬ ಪ್ರತಿಭಾನ್ವಿತ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ.

Suryakumar Yadav 5

ಮುಂಬೈನಲ್ಲಿ ಜನಿಸಿದ ಸೂರ್ಯಕುಮಾರ್‌ ಯಾದವ್‌ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ಆಡಿದ್ದರು. 2018ರಲ್ಲಿ ಮುಂಬೈ ತಂಡ 3.2 ಕೋಟಿ ರೂ. ನೀಡಿ ಖರೀದಿಸಿತ್ತು. ಈ ವರ್ಷದ ಐಪಿಎಲ್‌ಲ್ಲಿ 15 ಪಂದ್ಯವಾಡಿರುವ ಇವರು ಒಟ್ಟು 461 ರನ್‌ ಹೊಡೆದಿದ್ದಾರೆ. ಟಾಪ್‌ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸೂರ್ಯಕುಮಾರ್‌ ಯಾದವ್‌ 7ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ 100 ಪಂದ್ಯ ಆಡಿರುವ ಸೂರ್ಯಕುಮಾರ್‌ 30.37 ಸರಾಸರಿಯಲ್ಲಿ 2005 ರನ್‌ ಹೊಡೆದಿದ್ದಾರೆ. 135.10 ಸ್ಟ್ರೈಕ್‌ ರೇಟ್‌ ಹೊಂದಿರುವ ಇವರು 19 ಬಾರಿ ನಾಟೌಟ್‌ ಆಗಿದ್ದಾರೆ. ಅಜೇಯ 79 ರನ್‌ ವೈಯಕ್ತಿಕ ಗರಿಷ್ಟ ರನ್‌ ಆಗಿದ್ದು ಒಟ್ಟು 11 ಅರ್ಧಶತಕ, 220 ಬೌಂಡರಿ , 57 ಸಿಕ್ಸ್‌, 50 ಕ್ಯಾಚ್‌ ಹಿಡಿದಿದ್ದಾರೆ. ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಸೂರ್ಯಕುಮಾರ್‌ ಯಾದವ್‌ 77 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5,326 ರನ್‌ ಹೊಡೆದಿದ್ದಾರೆ.

kohli surya kumar yadav a

ಕೊಹ್ಲಿ ಸ್ಲೆಡ್ಲಿಂಗ್‌:
ಬೆಂಗಳೂರು, ಮುಂಬೈ ನಡುವಿನ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ 79 ರನ್‌ ಹೊಡೆದಿದ್ದರು. ಈ ಪಂದ್ಯದಲ್ಲಿ ನಾಯಕ ಕೊಹ್ಲಿ ಸ್ಲೆಡ್ಜಿಂಗ್‌ ಮಾಡಿದ್ದರು.13ನೇ ಓವರಿನ ಅಂತಿಮ ಎಸೆತದ ಚೆಂಡನ್ನು ಎಕ್ಸ್ಟ್ರಾ ಕವರ್ ನತ್ತ ಸೂರ್ಯಕುಮಾರ್ ಯಾದವ್ ಬಾರಿಸಿದ್ದರು. ಈ ಚೆಂಡನ್ನು ಕೊಹ್ಲಿ ತಡೆದಿದ್ದರು. ಓವರ್ ಮುಕ್ತಾಯವಾದ ಕಾರಣ ಸೂರ್ಯಕುಮಾರ್ ಯಾದವ್ ಕ್ರಿಸ್‍ನಲ್ಲೇ ಕೊಹ್ಲಿ ಅವರನ್ನು ನೋಡುತ್ತಾ ನಿಂತಿದ್ದರು. ಕೂಡಲೇ ಚೆಂಡನ್ನು ಪಡೆದ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬಳಿ ಗರಂ ಆಗಿ ಹೋಗಿ ನಿಂತರು. ಇತ್ತ ಸೂರ್ಯಕುಮಾರ್ ಸಮಯದ ಬಳಿಕ ನಾನ್ ಸ್ಟ್ರೈಕರ್ ಬ್ಯಾಟ್ಸ್ ಮನ್ ಬಳಿಗೆ ತೆರಳಿದ್ದರು. ಯಾದವ್ ಅಲ್ಲಿಂದ ಮುಂದೆ ಸಾಗಿದರೆ ಕೊಹ್ಲಿ ಮಾತ್ರ ಕೆಲ ಸಮಯ ಅವರನ್ನೇ ನೋಡುತ್ತಾ ನಿಂತಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.

kohli surya kumar yadav

ಕೊಹ್ಲಿ ಸ್ಲೆಡ್ಜಿಂಗ್ ಮಾಡುತ್ತಿದಂತೆ ಸೂರ್ಯಕುಮಾರ್ ಯಾದವ್ ಅವರ ಹಳೆಯ ಟ್ವೀಟ್‍ಗಳನ್ನು ಬೆಳಕಿಗೆ ತರುತ್ತಿರುವ ಅಭಿಮಾನಿಗಳು ಟ್ವೀಟ್‍ಗಳನ್ನು ವೈರಲ್ ಮಾಡುತ್ತಿದ್ದಾರೆ. 2016 ರಿಂದ ಸೂರ್ಯಕುಮಾರ್ ವಿರಾಟ್ ಕೊಹ್ಲಿ ಕುರಿತು ಟ್ವೀಟ್ ಮಾಡುತ್ತಿದ್ದಾರೆ. ನಂಬರ್ 3ನೇ ಕ್ರಮಾಂಕದಲ್ಲಿ ಕ್ರಿಕೆಟ್ ದೇವರು ಭಾರತ ತಂಡ ಸಂಕಷ್ಟದಲ್ಲಿದ್ದರೆ ಪ್ರತಿ ಬಾರಿ ಕಾಪಾಡುತ್ತಾರೆ ಎಂದು 2016 ಮಾರ್ಚ್ 20 ರಂದು ಟ್ವೀಟ್ ಮಾಡಿದ್ದರು. ಇತ್ತ 2019ರ ಡಿಸೆಂಬರ್ 5 ರಂದು ಮತ್ತೊಂದು ಟ್ವೀಟ್ ಮಾಡಿದ್ದ ಅವರು, ವಿಶ್ವ ಕ್ರಿಕೆಟ್‍ನಲ್ಲಿ ಕೊಹ್ಲಿ ಅತ್ಯುನ್ನತ ಸ್ಥಾನವನ್ನು ತಲುಪಿದ್ದಾರೆ ಎಂದು ಬರೆದುಕೊಂಡಿದ್ದರು.

ಕೊಹ್ಲಿ ಪರ ಇಷ್ಟು ಅಭಿಮಾನವನ್ನು ಹೊಂದಿರುವ ಯುವ ಆಟಗಾರನ ವಿರುದ್ಧ ಕೊಹ್ಲಿ ಸ್ಲೆಡ್ಜಿಂಗ್ ಮಾಡಿರುವುದು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ವಿರಾಟ್ ಕೊಹ್ಲಿರನ್ನು ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಕೆ ಮಾಡಿ ಟೀಕೆ ಮಾಡಿದ್ದರು. ಯಾವುದೇ ಕಾರಣವಿಲ್ಲದೇ ಕೊಹ್ಲಿ ಸೂರ್ಯಕುಮಾರ್ ಯಾದವ್ ಮೇಲೆ ಗರಂ ಆಗಿದ್ದು ಯಾಕೆ ಎಂದು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *