ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ಚಿರಂಜೀವಿ ಸರ್ಜಾ ಸಾವಿನ ಕುರಿತು ಚರ್ಚೆ ಹುಟ್ಟುಹಾಕಿದ್ದರು. ಆದರೆ ಇಂದ್ರಜಿತ್ ಆರೋಪಕ್ಕೆ ಚಿರು ಪತ್ನಿ ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್
ಇಂದ್ರಜಿತ್ ಲಂಕೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾಗ, ಇತ್ತೀಚೆಗೆ ಒಬ್ಬ ಯುವ ನಟ ತೀರಿಹೋದರು ಅವರ ಮರಣೋತ್ತರ ಪರೀಕ್ಷೆಯೇ ಆಗಲಿಲ್ಲ. ಯಾಕೆ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ? ಎಂದು ಪ್ರಶ್ನೆ ಮಾಡಿದ್ದರು. ಇಂದ್ರಜಿತ್ ಪ್ರಶ್ನೆ ಮಾಡಿದ ನಂತರ ಮೂರು ತಿಂಗಳ ನಂತರ ಚಿರು ಸಾವಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಇಂದ್ರಜಿತ್ ಹೇಳಿಕೆಗೆ ಪರವಿರೋಧ ಹೇಳಿಕೆಗಳು ಕೇಳಿಬರುತ್ತಿದೆ.
ಇದೀಗ ಇಂದ್ರಜಿತ್ ಆರೋಪಕ್ಕೆ ಚಿರು ಪತ್ನಿ ಮೇಘನಾ ರಾಜ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೇಘನಾ ರಾಜ್ ವಾಟ್ಸಪ್ ಮೆಸೇಜ್ ಮೂಲಕ ಪ್ರಶಾಂತ್ ಸಂಬರಗಿ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಇಂದ್ರಜಿತ್ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಮೃತಪಟ್ಟಿರುವವರು ಈಗ ಮಾತಾಡಲು ಸಾಧ್ಯನಾ? ಈಗ ಚಿರು ಇಲ್ಲ, ಈಗ ಅವರ ಉತ್ತರ ಕೊಡಲು ಸಾಧ್ಯವೇ ಎಂದು ಬೇಸರ ತೋಡಿಕೊಂಡಿದ್ದಾರೆ.
ಚಿರು ಈಗ ಇಲ್ಲ, ಆದರೂ ಅವರನ್ನು ಜನ ಬಿಡುತ್ತಿಲ್ಲ. ಚಿರು ಸರ್ಜಾ ಹೆಸರು ಹೇಳಿದರೆ ಇವರಿಗೆ ಏನು ಸಿಗುತ್ತೆ?, ಟಿವಿಯಲ್ಲಿ ಚಿರು ಫೋಟೋ ನೋಡಿದರೆ ಕಣ್ಣೀರು ಬರುತ್ತೆ. ಇಂದ್ರಜಿತ್ ಬೇರೆಯವರ ಹೆಸರನ್ನು ಹಾಳು ಮಾಡಬಾರದು. ಅಲ್ಲದೇ ಇಂದ್ರಜಿತ್ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಚಿರು ಹೆಸರನ್ನು ಇಂದ್ರಜಿತ್ ಯಾಕೆ ಹೇಳುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ ಎಂದು ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ನೋವಿನಿಂದ ಮಾತನಾಡಿದ್ದಾರೆ.