ಚಾಮರಾಜನಗರ: ಟಿಪ್ಪು ಸುಲ್ತಾನ್ ಕುರಿತು ಮಾಜಿ ಸಚಿವ ವಿಶ್ವನಾಥ್ ಅವರದ್ದು ವೈಯಕ್ತಿಕ ಅಭಿಪ್ರಾಯವೇ ಹೊರತು ಬಿಜೆಪಿಯ ಅಭಿಪ್ರಾಯವಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಮಾತನಾಡುವ ಸ್ವಾತಂತ್ರ್ಯವಿದೆ, ಆದರೆ ಬಿಜೆಪಿಯ ನಾಯಕರಾಗಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಮಾತನಾಡುವ ಮುನ್ನ ಪಕ್ಷ ನಿಲುವೇನು ಎಂಬುದನ್ನು ಯೋಚಿಸಬೇಕು ಅವರು ಎಂಎಲ್ ಸಿ ಹೆಚ್.ವಿಶ್ವನಾಥ್ ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.
ಒಂದು ಬಾರಿ ಪಕ್ಷಕ್ಕೆ ಸೇರಿದ ಮೇಲೆ ಇಲ್ಲಿನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು. ಹೆಚ್.ವಿಶ್ವನಾಥ್ ಪ್ರಬುದ್ಧರಿದ್ದಾರೆ. ಈ ರೀತಿ ಮಾತನಾಡುವಾಗ ಯಾವ ಪಕ್ಷದಲ್ಲಿದ್ದೇನೆ ಅನ್ನುವುದನ್ನು ಯೋಚನೆ ಮಾಡಿ ಮಾತನಾಡಿದರೆ ಒಳಿತು ಎಂದು ಪರೋಕ್ಷವಾಗಿ ವಿಶ್ವನಾಥ್‍ಗೆ ಎಚ್ಚರಿಕೆ ಕೊಟ್ಟರು. ವಿಶ್ವನಾಥ್ ಅವರ ಸ್ವಭಾವವೇ ಹಾಗೇ ಯಾವುದಾದರೂ ವಿಚಾರ ಬಂದರೆ ಮುನ್ನುಗ್ಗಿ ಮಾತನಾಡುತ್ತಾರೆ. ಅವರ ಯಾವುದೋ ಒಂದು ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗುವುದಿಲ್ಲ ಎಂದರು.
ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ವಿಶ್ಚನಾಥ್ ಅವರಿಗೆ ಅನುಭವವಿದೆ. ಆದರೆ ಅವರು ಸಚಿವರಾಗುವುದು ಕಾನೂನಿಗೆ ಬಿಟ್ಟ ವಿಚಾರ. ಕಾನೂನು ಪಂಡಿತರು ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಮೂಲಕ ಸಚಿವ ವಿಶ್ವನಾಥ್ ಗೆ ಮಂತ್ರಿಗಿರಿ ಸಿಗುವುದಕ್ಕೆ ಕಾನೂನು ತೊಡಕಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.