ಚಿಕ್ಕೋಡಿ/ಬೆಳಗಾವಿ: ಟಿಪ್ಪರ್ ಹಾಗೂ ಎರಡು ಬೈಕುಗಳ ನಡುವೆ ಸರಣಿ ಅಪಘಾತ ಸಂಭವಿಸಿ ಓರ್ವ ಮಹಿಳೆ ಹಾಗೂ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಬಳಿ ನಡೆದಿದೆ.
ಸರಣಿ ಅಪಘಾತ ಸಂಭವಿಸಿ, ಎರಡು ಬೈಕಗಳು ಟಿಪ್ಪರಗೆ ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಚಲಾಯಿಸುತ್ತಿದ್ದ ಪೂನಂ ಬಲಿರಾಮ ತಲವಾರೆ(25) ಸ್ಥಳದಲ್ಲೇ ಸಾವನ್ನಪ್ಪಿದರೆ, ಬೈಕ್ ಮೇಲಿದ್ದ ಬಾಳಪ್ಪ ಕುಮಾರ್ ಕಾಂಬ್ಳೆ(21) ಆಸ್ಪತ್ರೆಗೆ ದಾಖಲಿಸಿದ ಬಳಿಕ ಸಾವನ್ನಪ್ಪಿದ್ದಾರೆ.
ಅಪಘಾತದ ರಭಸಕ್ಕೆ ಲಾರಿ ಅಡಿ ಸಿಲುಕಿ ಮೊಪೆಡ್ ನೆಲಕ್ಕೆ ಉಜ್ಜಿ ಬೆಂಕಿ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಲ್ಲದೆ ಟಿಪ್ಪರ್ ಸಹ ಭಾಗಶಃ ಸುಟ್ಟು ಹೋಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೆಂಕಿ ಹೊತ್ತಿಕೊಂಡಿದ್ದರಿಂದ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿ ಸಿಬ್ಬಂಧಿ ಬೆಂಕಿ ಆರಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಹಸನ್ ಮುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಯಭಾಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.