ಹೈದರಾಬಾದ್: ತೆಲುಗು ದೇಶಂ ಪಕ್ಷದ ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಕೊಂದಿರುವ ಘಟನೆ ತೆಲಂಗಾಣದ ಜಂಗಾಂವ್ ನಲ್ಲಿ ನಡೆದಿದೆ. ಜಂಗಾಂವ್ ಹೈದರಾಬಾದ್ ನಿಂದ 85 ಕಿ.ಮೀ ದೂರದಲ್ಲಿದೆ.
ಮೃತಪಟ್ಟ ವ್ಯಕ್ತಿ ಜಂಗಾಂವ್ ಪುರಸಭೆಯ ಮಾಜಿ ಕೌನ್ಸಿಲರ್ ಪುಲಿ ಸ್ವಾಮಿ(53) ಎಂದು ಗುರುತಿಸಲಾಗಿದೆ. ಮುಂಜಾನೆ ಹೈದರಾಬಾದ್-ವಾರಂಗಲ್ ಹೆದ್ದಾರಿಯಲ್ಲಿರುವ ಸಮಾಜ ಕಲ್ಯಾಣ ವಸತಿ ಶಾಲೆಯ ಬಳಿ ವಾಕಿಂಗ್ ಮಾಡುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಕೊಡಲಿಯಿಂದ ಪುಲಿ ಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ ಪ್ರಕಾರ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಳೆಯ ದ್ವೇಷ ಹಿನ್ನೆಲೆ ಪುಲಿ ಸ್ವಾಮಿಯನ್ನು ಆರೋಪಿಗಳು ಕೊಂದಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಇತ್ತೀಚೆಗಷ್ಟೇ ಇದೇ ವಿಚಾರವಾಗಿ ಸ್ಥಳೀಯ ನ್ಯಾಯಾಲಯ ಟಿಡಿಪಿ ನಾಯಕರ ಪರವಾಗಿ ತೀರ್ಮಾನ ನೀಡಿತ್ತು.
ಈ ವಿಚಾರವಾಗಿ ಮಾತನಾಡಿದ ಸಹಾಯಕ ಪೊಲೀಸ್ ಆಯುಕ್ತ ನಿನೋದ್ ಕುಮಾರ್, ಆರೋಪಿಗಳು ಕೊಲೆ ಮಾಡಿ ತಕ್ಷಣ ಹೊರಡಲು ಬೈಸಿಕಲ್ ನಲ್ಲಿ ಹಿಂದಿರುಗಲು ಸ್ಟಾರ್ಟ್ ಮಾಡಿದ್ದಾರೆ. ಆದರೆ ಬೈಸಿಕಲ್ ಸ್ಟಾರ್ಟ್ ಆಗದ ಕಾರಣ ಗಾಡಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ವಾಹನದ ಮಾಲೀಕರನ ಹುಡುಕಾಡುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಕೂಡ ಬಂಧಿಸಲಾಗುತ್ತದೆ ಎಂದು ತಿಳಿಸಿದರು