– ಉತ್ತರಿಸಲು ಮೂರು ವಾರಗಳ ಗಡುವು
ನವದೆಹಲಿ: ಗಲ್ವಾನ್ ಘರ್ಷಣೆಯ ಬಳಿಕ ನಿಷೇಧಗೊಂಡಿರುವ 59 ಚೀನಾ ಅಪ್ಲಿಕೇಶನ್‌ಗಳಿಗೆ ಸರ್ಕಾರ 79 ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುವಂತೆ ಸೂಚಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ 79 ಪ್ರಶ್ನೆಗಳನ್ನು ಸಿದ್ಧಪಡಿಸಿ ಜುಲೈ 22ರ ಒಳಗಡೆ ಉತ್ತರಿಸುವಂತೆ ನೋಟಿಸ್ ನೀಡಿದೆ. ಒಂದು ವೇಳೆ ಮೂರು ವಾರದ ಒಳಗಡೆ ಉತ್ತರಿಸದಿದ್ದರೆ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕಂಪನಿಯ ಮೂಲ ಯಾವುದು? ಪೇರೆಂಟ್ ಕಂಪನಿಯ ರಚನೆ ಹೇಗೆ? ಕಂಪನಿಗೆ ಹಣ ಹೂಡಿದವರು ಯಾರು? ದತ್ತಾಂಶ ನಿರ್ವಹಣೆ, ಸರ್ವರ್‌ಗಳ ಬಗ್ಗೆ ಸರ್ಕಾರ ಪ್ರಶ್ನೆ ಕೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಸಾರ್ವಭೌಮ ರಾಷ್ಟ್ರಕ್ಕೆ ಇರುವ ಅಧಿಕಾರಗಳ ಅಡಿ ಕೇಂದ್ರ ಸರ್ಕಾರ ಚೀನಿ ಕಂಪನಿಗಳಿಗೆ ನೋಟಿಸ್ ನೀಡಿದೆ. ಈ ಕಂಪನಿಗಳು ನೀಡಿದ ಉತ್ತರಗಳನ್ನು ವಿಶೇಷ ಸಮಿತಿ ಪರಿಶೀಲಿಸಲಿದೆ.
ಕಂಪನಿಗಳು ನೀಡಿದ ಉತ್ತರಗಳು ಸಮರ್ಪಕವಾಗಿದ್ದಲ್ಲಿ ನಿಷೇಧಗೊಂಡ ಅಪ್ಲಿಕೇಶನ್‌ಗಳು ಮತ್ತೆ ಆಪ್ ಸ್ಟೋರ್‌ಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು.