ಬೆಂಗಳೂರು: ನನ್ನ ಸಿನಿಮಾವನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ, ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಕನ್ನಡಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಇಂದಿಗೆ 25 ವರ್ಷ ತುಂಬಿದೆ. ಈ ವೇಳೆ ಟಾಲಿವುಡ್ ನಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆ ಅಡ್ಡಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ನಾನು ಇನ್ನೊಬ್ಬರ ಸಿನಿಮಾವನ್ನು ನಿಭಾಯಿಸುವಷ್ಟು ದೊಡ್ಡ ಕಲಾವಿದನಲ್ಲ. ಸಲಹೆ ನೀಡುವಂತ ವ್ಯಕ್ತಿ ಕೂಡ ಅಲ್ಲ. ಒಂದು ಸಿನಿಮಾ ಮಾಡಿದ ಮೇಲೆ ಅದು ನನ್ನ ಜವಾಬ್ದಾರಿ ನನ್ನ ಸಿನಿಮಾವನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ. ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ. ಹಾಗಾಗಿ ನಾವು ಆ ಸಿನಿಮಾದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡುವುದು ತಪ್ಪಾಗಬಹುದು ಎಂದು ಹೇಳಿದ್ದಾರೆ.
ಜನವರಿ 29ರಂದು ಟಾಲಿವುಡ್‍ನಲ್ಲಿ ರಾಬರ್ಟ್ ಚಿತ್ರ ಬಿಡುಗಡೆ ತಡೆ ಕುರಿತಂತೆ ಮಾಧ್ಯಮದವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಮ್ಮಲ್ಲಿರುವವರು ಕನ್ನಡಾಭಿಮಾನ ಬೆಳೆಸಿಕೊಳ್ಳಿ ಎಂದು ಹೇಳುತ್ತಾರೆ, ಆದರೆ ತಮಿಳು ಹಾಗೂ ತೆಲುಗಿನವರಿಗೆ ಇರುವಷ್ಟು ಭಾಷಾಭಿಮಾನ ನಮ್ಮವರಿಗೆ ಒಂದಿಷ್ಟು ಕೂಡ ಇಲ್ಲ ಎಂಬುವುದನ್ನು ನೇರವಾಗಿ ಹೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಕನ್ನಡದವರ ಹತ್ತಿರ ಬಂದು ತಮಿಳಿನವರು ತಮಿಳಿನಲ್ಲಿ ಮಾತನಾಡಿದರೆ, ನಾವು ತಮಿಳಿನಲ್ಲಿಯೇ ಮಾತನಾಡುತ್ತೇವೆ. ತೆಲುಗಿನವರು ಬಂದು ತೆಲುಗಿನಲ್ಲಿ ಮಾತನಾಡಿಸಿದರೆ, ನಾವು ತೆಲುಗಿನಲ್ಲಿ ಮಾತನಾಡುತ್ತೇವೆ. ಆದರೆ ಅವರಲ್ಲಿ ಯಾರಾದರೂ ಕನ್ನಡದಲ್ಲಿ ಮಾತನಾಡುತ್ತಾರಾ? ಎಂದು ಮರು ಪ್ರಶ್ನೆ ಮಾಡಿದ್ದರು.