ಯಾದಗಿರಿ: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಂಯೋಗದಲ್ಲಿ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಯ, ಜ್ಞಾನದೀವಿಗೆ ಕಾರ್ಯಕ್ರಮ ಇಂದು ಯಾದಗಿರಿ ಜಿಲ್ಲೆಯಲ್ಲಿ ನಡೆಯಿತು.
ಜಿಲ್ಲೆಯ ಶಹಪುರ ತಾಲೂಕಿನ ಚಾಮನಾಳ ಪ್ರೌಢಶಾಲೆಯ ಹತ್ತನೇ ತರಗತಿಯ 94 ವಿದ್ಯಾರ್ಥಿಗಳಿಗೆ 48 ಟ್ಯಾಬ್ ಗಳನ್ನು ಹಂಚಿಕೆ ಮಾಡಲಾಯಿತು. ಶಹಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಪಬ್ಲಿಕ್ ಟಿವಿಯ ಜ್ಞಾನ ದೀವಿಗೆ ಅಭಿಯಾನಕ್ಕೆ ದೇಣಿಗೆ ನೀಡಿ ಕೈ ಜೋಡಿಸುವ ಮೂಲಕ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ತಮ್ಮ ಟ್ಯಾಬ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರೌಢಶಾಲಾ ಶಿಕ್ಷಣ ಇಲಾಖೆ ವತಿಯಿಂದ ವಿಷಯ ನಿರೀಕ್ಷ ಚಂದ್ರಕಾಂತ್ ಎಸ್‍ಡಿಎಂಸಿ ಅಧ್ಯಕ್ಷ, ರೇವಣ ಸಿದ್ದಪ್ಪ, ಮುಖ್ಯ ಶಿಕ್ಷಕ ಬಸವರಾಜ್ ಭಾಗಿಯಾಗಿದ್ದರು.
Advertisement
Advertisement
ಚಾಮನಾಳ ಗ್ರಾಮದ ಪ್ರೌಢಶಾಲೆಯಲ್ಲಿ ಅಕ್ಕಪಕ್ಕದ ಸುಮಾರು 8 ಹಳ್ಳಿಗಳ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಇದರಲ್ಲಿ ಅತೀ ಹೆಚ್ಚು ತಾಂಡಗಳಿಂದ ಬರುವ ಮಕ್ಕಳಿದ್ದು, ಆನ್ ಲೈನ್ ಶಿಕ್ಷಣ ಎಂಬುವುದು ಈ ಶಾಲೆಯ ಮಕ್ಕಳಿಗೆ ಗಗನ ಕುಸುಮವಾಗಿತ್ತು. ಮನೆಯಲ್ಲಿನ ಬಡತನ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶದ ಕನಸಿಗೆ ನೀರು ಎರಚುತ್ತಿತ್ತು. ಆದರೆ ಪಬ್ಲಿಕ್ ಟಿವಿ ಈ ಮಕ್ಕಳ ಭವಿಷ್ಯಕ್ಕೆ ಈಗ ಆಸರೆಯಾಗಿದೆ. ಪಬ್ಲಿಕ್ ಟಿವಿಯ ಸಣ್ಣ ಪ್ರಯತ್ನ ನೂರಾರು ವಿದ್ಯಾರ್ಥಿಗಳ ಸುಂದರ ನಾಳೆಗಳನ್ನು ಬರೆಯುತ್ತಿದೆ.
Advertisement
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ದರ್ಶನಾಪುರ, ಕೊರೊನಾದಂತ ಕಷ್ಟದ ಸಮಯದಲ್ಲಿ ಪಬ್ಲಿಕ್ ಟಿವಿ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದು ಸರ್ಕಾರ ಮಾಡುವ ಕಾರ್ಯ ಮಾಡುತ್ತಿದೆ. ಇದರ ಜೊತೆಗೆ ಸರ್ಕಾರ ಸಾಕಷ್ಟು ಸೌಲಭ್ಯ ನಿಮಗೆ ನೀಡುತ್ತಿದೆ. ಇದರ ಪ್ರಯೋಜನ ಪಡೆದು ನಿಮ್ಮ ಸುಂದರ ಜೀವನ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
Advertisement