ಜೋಕಾವಿಕ್‌ರಿಂದಾಗಿ ರದ್ದಾಗುತ್ತಿದ್ದ ಐಪಿಎಲ್‌ – ಜೇ ಶಾ ವಿಶ್ವಾಸದಿಂದಾಗಿ ನಡೆಯಿತು ಟೂರ್ನಿ

Public TV
2 Min Read
novak djokovic Rohith Sharma IPL 2020

ಮುಂಬೈ: 13ನೇ ಆವೃತ್ತಿಯ ಐಪಿಎಲ್‌ ಈಗಾಗಲೇ ಪೂರ್ಣಗೊಂಡಿದ್ದು ಮುಂಬೈ ಇಂಡಿಯನ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಆದರೆ ನೊವಾಕ್‌ ಜೋಕಾವಿಕ್‌ ಅವರಿಂದಾಗಿ ಈ ಬಾರಿಯ ಐಪಿಎಲ್‌ ನಡೆಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಬಿಸಿಸಿಐ ಸಿಲುಕಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ಈ ವರ್ಷದ ಐಪಿಎಲ್‌ ಭಾರತದಲ್ಲಿ ಮಾರ್ಚ್‌ 29 ರಿಂದ ನಡೆಯಬೇಕಿತ್ತು. ಈ ಅವಧಿಯಲ್ಲಿ ಲಾಕ್‌ಡೌನ್‌ ಘೋಷಣೆಯಾಗಿತ್ತು. ಬಳಿಕ ಎಲ್ಲಿ ನಡೆಸಬೇಕು ಬಿಸಿಸಿಐ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿತ್ತು.

ipl cup

ಯುಎಇಯಲ್ಲಿ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಸರ್ಬಿಯಾದ ಟೆನ್ನಿಸ್‌ ಆಟಗಾರ ನೊವಾಕ್‌ ಜೋಕಾವಿಕ್‌ ತಾನು ಕೋವಿಡ್‌ 19 ತುತ್ತಾಗಿದ್ದೇನೆ ಎಂದು ಜೂನ್‌ 23 ರಂದು ಪ್ರಕಟಿಸಿದರು. ಹೀಗಾಗಿ ಈ ಬಾರಿ ಐಪಿಎಲ್‌ ನಡೆಸಬೇಕೋ ಬೇಡವೋ? ಆಟಗಾರರಿಗೆ ಕೊರೊನಾ ಬಂದರೆ ಏನು ಮಾಡುವುದು ಎಂಬ ಚಿಂತೆ ಬಿಸಿಸಿಐಯನ್ನು ಕಾಡಿತ್ತು. ಆದರೆ ಕೊನೆಗೆ ಸಭೆ ನಡೆಸಿ ಬಿಸಿಸಿಐ ಕಾರ್ಯದರ್ಶಿ ಆಗಿರುವ ಗೃಹ ಸಚಿವ ಅಮಿತ್‌ ಶಾ ಪುತ್ರ ಜೇ ಶಾ ವಿಶ್ವಾಸದ ಮಾತುಗಳ ಬಳಿಕ ಟೂರ್ನಿ ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು ಎಂಬ ವಿಚಾರವನ್ನು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ.

ಮಾಧ್ಯಮಕ್ಕೆ ಸಂದರ್ಶನ ನೀಡಿದ ಅವರು, ನೊವಾಕ್‌ ಜೋಕಾವಿಕ್‌ ಅವರು ಕೊರೊನಾ ಪಾಸಿಟವ್‌ ಎಂದು ವರದಿಯಾದ ಬಳಿಕ ನಮ್ಮ ತಲೆಯಲ್ಲಿ ಎರಡು ವಿಚಾರಗಳು ಓಡುತ್ತಿತ್ತು. ಬಹಳಷ್ಟು ಮಂದಿ ಈ ಬಾರಿ ಐಪಿಎಲ್‌ ಆಯೋಜಿಸುವುದೇ ಬೇಡ ಎಂದು ಹೇಳಿದ್ದರು. ಐಪಿಎಲ್‌ ಮೂರು ತಿಂಗಳು ಇರುತ್ತದೆ. ಒಂದು ವೇಳೆ ಆಟಗಾರರಿಗೆ ಏನಾದರೂ ಆದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದರು. ಆದರೆ ಜೇ ಶಾ ಯಾವುದೇ ಕಾರಣಕ್ಕೆ ರದ್ದು ಮಾಡುವುದು ಬೇಡ. ಆಟ ಆಡಿಸೋಣ. ಈ ವಿಚಾರದಲ್ಲಿ ಮುಂದುವರಿಯೋಣ ಎಂದಿದ್ದರು. ನಮ್ಮೆಲ್ಲರಿಗಿಂತ ಹೆಚ್ಚಿನ ವಿಶ್ವಾಸ ಜೇ ಶಾ ಅವರಿಗಿತ್ತು ಎಂದು ಧುಮಾಲ್‌ ತಿಳಿಸಿದರು.

RCB DELHI IPL 3

17 ಗ್ರಾಂಡ್‌ ಸ್ಲಾಮ್‌ ವಿಜೇತ ನೊವಾಕ್‌ ಜೋಕಾವಿಕ್‌ ಸೇರಿದಂತೆ ಟೂರ್ನಿಯಲ್ಲಿದ್ದ 3 ಮಂದಿಗೆ ಕೊರೊನಾ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಜೋಕಾವಿಕ್‌ ಈ ವಿಷಯ ತಿಳಿಸಿ ಟೂರ್ನಿಯಲ್ಲಿ ಆಡಿದ್ದಕ್ಕೆ ಕ್ಷಮೆ ಕೇಳಿದ್ದರು. ಈ ಕಾರಣಕ್ಕೆ ಬಿಸಿಸಿಐ ಐಪಿಎಲ್‌ ಆಡಿಸಬೇಕೋ? ಬೇಡವೋ ಎಂಬ ಗೊಂದಲಕ್ಕೆ ಸಿಲುಕಿತ್ತು.

ಈ ನಡುವೆ ಕೇಂದ್ರ ಸರ್ಕಾರ ವಿದೇಶದಲ್ಲಿ ಐಪಿಎಲ್‌ ಆಡಿಸಲು ಅನುಮತಿ ನೀಡಿದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅಗಸ್ಟ್‌ನಲ್ಲಿ ಅಧಿಕೃತವಾಗಿ ಯುಎಇಯಲ್ಲಿ ಟೂರ್ನಿ ಆಡಿಸುವುದಾಗಿ ಪ್ರಕಟಿಸಿದರು. ಕೋವಿಡ್‌ 19 ಬಿಗಿ ನಿಯಮ, ಕ್ವಾರಂಟೈನ್‌, ಸಾಮಾಜಿಕ ಅಂತರ ಪಾಲಿಸಿಕೊಂಡು ಅಬುಧಾಬಿ, ದುಬೈ, ಶಾರ್ಜಾದಲ್ಲಿ ಪಂದ್ಯ ಆಡಿಸುವ ಮೂಲಕ ಈ ಬಾರಿಯ ಐಪಿಎಲ್‌ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

CHENNAI IPL

Share This Article
Leave a Comment

Leave a Reply

Your email address will not be published. Required fields are marked *