– ಕೆಲಸ ನೀಡಿದರೆ ಮಾಡಲು ಸಿದ್ಧ
ಜೈಪುರ: ರಾಜಸ್ತಾನದ ಜೈಪುರದಲ್ಲಿ ಪೊಲೀಸರು ಸಮೀಕ್ಷೆ ನಡೆಸಿದ್ದು, ನಗರದಲ್ಲಿರುವ 1,162 ಭಿಕ್ಷುಕರಲ್ಲಿ ಇಬ್ಬರು ಸ್ನಾತಕೋತ್ತರ ಮತ್ತು ಮೂವರು ಪದವೀಧರರನ್ನು ಪತ್ತೆ ಮಾಡಿದ್ದಾರೆ.
ಜೈಪುರವನ್ನು ಭಿಕ್ಷುಕರಿಂದ ಮುಕ್ತವಾಗಿ ಮಾಡುವುದು ಮತ್ತು ಅವರಿಗೆ ಕೆಲವು ಉದ್ಯೋಗ ಕೌಶಲ್ಯಗಳನ್ನು ನೀಡುವುದು, ಇತರರನ್ನು ಕೌಶಲ್ಯರಹಿತ ಉದ್ಯೋಗಗಳಿಗೆ ಪರಿಚಯಿಸುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ಈ ಸಮೀಕ್ಷೆಯ ಪ್ರಕಾರ ಜೈಪುರದಲ್ಲಿ 825 ಭಿಕ್ಷಕರು ಅನಕ್ಷರಸ್ಥರು, 39 ಜನ ಅಕ್ಷರಸ್ಥರು ಮತ್ತು 193 ಜನ ಶಾಲೆಗೆ ಹೋಗಿದ್ದವರು ಸಿಕ್ಕಿದ್ದಾರೆ.
ಸಮೀಕ್ಷೆಯ ಪ್ರಕಾರ, ಪದವೀಧರ ಭಿಕ್ಷುಕರು ಜೈಪುರದ ರಾಮ್ನಿವಾಸ್ ಬಾಗ್, ಸಿ-ಸ್ಕೀಮ್ ಮತ್ತು ವಾಲ್ಡ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾವಂತ ಭಿಕ್ಷುಕರು ಅವಕಾಶ ನೀಡಿದರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ಮಾಡಿದ ಸಂಸ್ಥೆಯವರು ಹೇಳಿದ್ದಾರೆ. ಅಕ್ಷರಸ್ಥ ಐದು ಜನ ಭಿಕ್ಷುಕರಲ್ಲಿ ಇಬ್ಬರು 32 ಮತ್ತು 35 ವರ್ಷದೊಳಗಿನವರು, ಇನ್ನಿಬ್ಬರು 50 ರಿಂದ 55 ವರ್ಷದೊಳಗಿನವರು ಮತ್ತು ಒಬ್ಬರು 65 ವರ್ಷ ವಯಸ್ಸಿನವರು ಎಂದು ತಿಳಿದು ಬಂದಿದೆ.
ಐದು ಉನ್ನತ ಮಟ್ಟದ ವಿದ್ಯಾವಂತ ಭಿಕ್ಷುಕರು ಹೋಟೆಲ್‍ಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಮತ್ತು ಇತರ ಕೌಶಲ್ಯರಹಿತ ಉದ್ಯೋಗಗಳಲ್ಲಿ ಕೆಲಸ ಮಾಡಲು ಸಿದ್ಧವಿದ್ದೇವೆ ಎಂದು ಸರ್ವೇಯರ್ ಗಳಿಗೆ ತಿಳಿಸಿದ್ದಾರೆ. ಒಟ್ಟು ಭಿಕ್ಷುಕರಲ್ಲಿ ಕನಿಷ್ಠ 419 ಮಂದಿ ಜನರು ಈ ಕೆಲಸವನ್ನು ಬಿಟ್ಟು ಒಳ್ಳೆಯ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ 27 ಭಿಕ್ಷುಕರು ಅಧ್ಯಯನ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಇದರಲ್ಲಿ ಓರ್ವ ಭಿಕ್ಷುಕ ಮಾತನಾಡಿ, ನಾನು ಝೂನ್‍ಝುನು ಮೂಲದವನು. 25 ವರ್ಷಗಳ ಹಿಂದೆ ಸರ್ಕಾರಿ ಕಾಲೇಜಿನಿಂದ ಪದವಿ ಪಡೆದಿದ್ದೇನೆ. ಉದ್ಯೋಗ ಹುಡುಕಲು ಜೈಪುರಕ್ಕೆ ಬಂದೆ ಆದರೆ ನನಗೆ ಇಲ್ಲಿ ಉದ್ಯೋಗ ಸಿಗಲಿಲ್ಲ. ಈ ಸಮಯದಲ್ಲಿ ನನಗೆ ತಿನ್ನಲು ಮತ್ತು ಮಲಗಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ನನಗೆ ಕುಟುಂಬದವರೆಂದು ಯಾರೂ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಬೀದಿಯಲ್ಲಿ ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಮಗೆ ಅವಕಾಶ ಕೊಟ್ಟರೆ ಗೌರವಯುತ ಜೀವನವನ್ನು ಕಟ್ಟಿಕೊಳ್ಳಲು ಸಿದ್ಧವಿದ್ದೇವೆ. ನಾನು ಕಾರ್ಮಿಕ ಕೆಲಸ ಅಥವಾಸ ನಗರವನ್ನು ಸ್ವಚ್ಛ ಮಾಡುವ ಕೆಲಸವಾಗಲಿ ಮಾಡಲು ಸಿದ್ಧ. ನನಗೆ ದೈನಂದಿನ ಅಗತ್ಯಗಳನ್ನು ಖರೀದಿಸಲು ಮತ್ತು ಮನೆಗೆ ಬಾಡಿಗೆ ಪಾವತಿಸಲು ಸಾಧ್ಯವಾಗುವಷ್ಟು ಸಂಬಳ ನೀಡಿದರೆ ಸಾಕು. ಎಲ್ಲರೂ ಒಳ್ಳೆಯ ಜೀವನವನ್ನು ಬಯಸುತ್ತಾರೆ. ಹಾಗೆಯೇ ನಾವು ಕೂಡ ಗೌರವಯುತ ಜೀವನವನ್ನು ಬಯಸುತ್ತೇವೆ ಎಂದು ತಿಳಿಸಿದ್ದಾರೆ.