– ರಸ್ತೆ ಅಗಲೀಕರಣಕ್ಕಾಗಿ ತೆರವು ಕಾರ್ಯಾಚರಣೆ ವೇಳೆ ಹಲ್ಲೆ
– ನ್ಯಾಯಾಲಯದಿಂದ ಜಾಮೀನು ಮಂಜೂರು
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕೊರೊನಾ ನಡುವೆಯೂ ಹಾಲಿ, ಮಾಜಿ ಶಾಸಕರ ಪ್ರತಿಷ್ಠೆ ರಾಜಕೀಯ ಜೋರಾಗಿದೆ. ಉಭಯ ಮುಖಂಡರ ಬೆಂಬಲಿಗರು ಮಹಾಮಾರಿಯ ಆತಂಕವಿಲ್ಲದೇ ಗುಂಪು ಗಲಾಟೆ ಮಾಡಿಕೊಳ್ಳುತ್ತಾ ರಂಪಾಟ ಮಾಡುತ್ತಿದ್ದಾರೆ. ಇಂದು ರಸ್ತೆ ಅಗಲೀಕರಣಕ್ಕಾಗಿ ತೆರವು ಕಾರ್ಯಾಚರಣೆ ಮಾಡುತ್ತಿದ್ದ ಜೆಸಿಬಿ ಚಾಲಕನಿಗೆ ಮಾಜಿ ಶಾಸಕ ಹಲ್ಲೆ ಮಾಡಿ ದರ್ಪ ಮೆರೆದಿದ್ದಾರೆ.
ಕೊರೊನಾದಿಂದ ಇಡೀ ದೇಶವೇ ತತ್ತರಿಸುತ್ತಿದೆ. ಸಕ್ಕರೆ ನಾಡು ಮಂಡ್ಯದಲ್ಲೂ ಮಹಾಮಾರಿ ರುದ್ರನರ್ತನ ಕಡಿಮೆಯಾಗುತ್ತಿಲ್ಲ. ಹೀಗಿದ್ದರೂ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಪ್ರತಿಷ್ಠೆಯ ರಾಜಕೀಯ ಜೋರಾಗಿದೆ. ಅಲ್ಲದೇ ಉಭಯ ಮುಖಂಡರ ಬೆಂಬಲಿಗರು ಕೊರೊನಾ ಆತಂಕವಿಲ್ಲದೇ ಗುಂಪು ಗುಂಪಾಗಿ ಜಗಳವಾಡಿಕೊಂಡು ರಂಪಾಟ ಮಾಡಿಕೊಳ್ಳಿತ್ತಿದ್ದಾರೆ. ಮೊನ್ನೆಯಷ್ಟೇ ಶ್ರೀರಂಗಪಟ್ಟಣ ಪಿಎಲ್‍ಡಿ ಬ್ಯಾಂಕ್ ಆವರಣದಲ್ಲಿ ಮಳಿಗೆ ಉದ್ಘಾಟನೆ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಇಂದು ರಸ್ತೆ ಅಗಲೀಕರಣದ ವಿಚಾರದಲ್ಲಿ ರಂಪಾಟ ನಡೆಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವಿಚಾರದಲ್ಲಿ ಮಾಲಿ ಹಾಗೂ ಮಾಜಿ ಶಾಸಕರು ಪ್ರತಿಷ್ಠೆಗೆ ಬಿದ್ದಿದ್ದಾರೆ. 10 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಗ್ರಾಮದ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ಹೀಗಾಗಿ ರಸ್ತೆ ಬದಿಯ ಮನೆ ಹಾಗೂ ಅಂಗಡಿಗಳನ್ನು ತೆರವುಗೊಳಿಸಲು ಇಂದು ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಬಂದಿದ್ದಾರೆ. ಜೆಸಿಬಿ ಮೂಲಕ ಬಸ್ ನಿಲ್ದಾಣ ತೆರವು ಮಾಡುತ್ತಿದ್ದಂತೆ ಆಕ್ರೋಶಗೊಂಡ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಬೆಂಬಲಿಗರು ಕಲ್ಲು ತೂರಾಡಿದ್ದಾರೆ. ಈ ವೇಳೆ ರಮೇಶ್ ಬಂಡಿಸಿದ್ದೇಗೌಡ ಜೆಸಿಬಿ ಚಾಲಕನ್ನು ಎಳೆದಾಡಿ ಹಲ್ಲೆಗೆ ಮುಂದಾಗಿದ್ದಾರೆ. ಇದ್ರಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣೆ ನಿರ್ಮಾಣಗೊಂಡಿತ್ತು.
ಗಲಾಟೆಗೆ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ದ್ವೇಷದ ರಾಜಕಾರಣವೇ ಕಾರಣ ಎಂದು ರಮೇಶ್ ಬಂಡಿಸಿದ್ದೇಗೌಡ ಆರೋಪಿಸಿದ್ದಾರೆ. ಗ್ರಾಮದಲ್ಲಿ ರಸ್ತೆ ಅಗಲೀಕರಣ ಅವಶ್ಯಕತೆ ಇರಲಿಲ್ಲ. ರಸ್ತೆ ಬದಿಯಲ್ಲಿ ನಮ್ಮ ಬೆಂಬಲಿಗರ ಮನೆಗಳು ಇರುವುದರಿಂದ ಅವರಿಗೆ ತೊಂದರೆ ಕೊಡಬೇಕೆಂದೇ ಅಗಲೀಕರಣ ಕಾಮಗಾರಿಕ್ಕೆ ಕೈಹಾಕಿದ್ದಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್ ಯಾವುದೇ ಕಟ್ಟಡ ತೆರವು ಮಾಡದಂತೆ ಸೂಚನೆ ನೀಡಿದ್ದರು. ಅದರೂ ಶಾಸಕರ ಪ್ರಭಾವದಿಂದ ಬಸ್ ನಿಲ್ದಾಣ ಒಡೆದಿದ್ದಾರೆ. ನಾನು ಜೆಸಿಬಿ ಚಾಲಕನ್ನು ಹಿಡಿದುಕೊಂಡಿದ್ದು ತಪ್ಪು. ಅವರು ಬಸ್ ನಿಲ್ದಾಣ ಒಡಿಸಿದ್ದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರು ತೆರವು ಕಾರ್ಯಾಚರಣೆ ತಡೆದಿದ್ದರೆ, ಇನ್ನೊಂದೆಡೆ ಕಾರ್ಯಾಚರಣೆ ಮುಂದುವರೆಸುವಂತೆ ಹಾಲಿ ಶಾಸಕರ ಬೆಂಬಲಿಗರು ಘೋಷಣೆ ಕೂಗಲು ಆರಂಭಿಸಿದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಅರಿತ ಅಧಿಕಾರಿಗಳು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ತೆರವುಗೊಳಿಸುವ ಬಗ್ಗೆ ನಿರ್ಧರಿಸಲು ಚಿಂತನೆ ನಡೆಸಿದ್ದಾರೆ.
ಅರಕೆರೆ ಗ್ರಾಮದಲ್ಲಿ ಈವರೆಗೆ 10 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಹಲವರು ಕ್ವಾರಂಟೈನ್‍ನಲ್ಲಿದ್ದಾರೆ. ಪರಿಸ್ಥಿತಿ ಹೀಗಿದ್ರೂ ಮಾಜಿ ಹಾಲಿ ಶಾಸಕರು ಗುಂಪುಗಟ್ಟಿಕೊಂಡು ರಂಪಾಟ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಸಂಜೆ ವೇಳೆಗೆ ಲೋಕೋಪಯೋಗಿ ಎಇಇ ಮಹೇಶ್ ಸರ್ಕಾರಿ ಕಾಮಗಾರಿಗೆ ಅಡ್ಡಿ ಹಾಗೂ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿರುವುದರ ಬಗ್ಗೆ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರ ವಿರುದ್ಧ ಅರಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ದೂರಿನ ಅನ್ವಯ ಪೊಲೀಸರು ರಮೇಶ್ ಬಾಬು ಬಂಡಿಸಿದ್ದೇಗೌಡ ಅವರನ್ನು ಬಂಧಿಸಿ, ಶ್ರೀರಂಗಪಟ್ಟಣದ ಜೆಎಂಎಫ್‍ಸಿ ಕೊರ್ಟ್‍ನ ನ್ಯಾಯಾಧೀಶರ ಮುಂದೆ ನಿಲ್ಲಿಸಿದರು. ನಂತರ ನ್ಯಾಯಾಧೀಶರು ರಮೇಶ್ ಬಾಬು ಬಂಡಿಸಿದ್ದೇಗೌಡರಿಗೆ ಷರತ್ತು ಬದ್ಧ ಜಾಮೀನು ನೀಡಿ, ಇದೇ ತಿಂಗಳ 15ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿದ್ದಾರೆ.