ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸುಧೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ.
ಎರಡು ಪುಟಗಳ ಪತ್ರದಲ್ಲಿ, ಪಕ್ಷ ಸಂಘಟನೆಗೆ ಶ್ರಮವಹಿಸುವಂತೆ ಹೆಚ್‍ಡಿಡಿ ಮನವಿ ಮಾಡಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಗಳೇ ಸಿಎಂ ಆಗಿದ್ದರೂ ಕಾರ್ಯಕರ್ತರಿಗೆ ಏನೂ ಮಾಡಲು ಆಗಿಲ್ಲ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹೀಗಂತ ಪಕ್ಷದಿಂದ ಯಾರು ದೂರ ಉಳಿಯಬೇಡಿ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದಲೇ ಬೂತ್ ಮಟ್ಟದಿಂದ ಕೆಲಸ ಪ್ರಾರಂಭ ಮಾಡಿ ಎಂದು ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಪಕ್ಷದ ಸಭೆ ಮಾಡಲು ಆಗುತ್ತಿಲ್ಲ. ಹೀಗಾಗಿ ವಿಧಾನಸಭೆ ಕ್ಷೇತ್ರದ ಮಟ್ಟದಲ್ಲಿ ನೀವೇ ಕಾರ್ಯಕ್ರಮಗಳನ್ನು ರೂಪಿಸಿ. ಬಿಜೆಪಿ ಸರ್ಕಾರದ ವಿರೋಧಿ ನೀತಿಗಳನ್ನ ಜನರಿಗೆ ತಿಳಿಸಿ. ಗ್ರಾಮ, ಜಿಲ್ಲೆ, ವಾರ್ಡ್ ಮಟ್ಟದಿಂದ ಪಕ್ಷದ ಸಂಘಟನೆ ಮಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಜನರನ್ನು ಸೇರಿಸದೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸಂಘಟನೆ ಮಾಡಿ. ಸರ್ಕಾರದ ಭೂ ಕಾಯ್ದೆ, ಎಪಿಎಂಸಿ ಕಾಯ್ದೆ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ. ಕೇಂದ್ರ ಸರ್ಕಾರದ ಸಂವಿಧಾನ ವಿರೋಧ ನೀತಿಗಳನ್ನ ಜನರಿಗೆ ಮನವರಿಕೆ ಮಾಡಿಸಿ. ಕೊರೊನಾ ನೆಪದಲ್ಲಿ ಪಠ್ಯ ಕಡಿತ ಮಾಡಲು ಮುಂದಾಗುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನ ಕೈಬಿಡುತ್ತಿದೆ. ಈ ವಿಚಾರಗಳನ್ನ ಜನರಿಗೆ ಮನದಟ್ಟು ಮಾಡಿ. ಜನರ ಮಧ್ಯೆ ಇದ್ದು ಪಕ್ಷ ಸಂಘಟನೆ ಮಾಡಿ ಎಂದು ಪತ್ರದಲ್ಲಿ ತಮ್ಮ ನಾಯಕರು ಹಾಗೂ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಮನವರಿಕೆ ಮಾಡಿದ್ದಾರೆ.