ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರಿಗೆ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಸದ್ಯ ಸ್ಯಾಂಡಲ್‍ವುಡ್ ನಟ ಜಯರಾಮ್ ಕಾರ್ತಿಕ್ ಕೂಡ ಇದೀಗ ಕೊರೊನಾ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ.
ಹೌದು, ನಟ ಜೆಕೆ ಹಾಗೂ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿರುವ ‘ಐರಾವನ್’ ಚಿತ್ರತಂಡ ಆಕ್ಸಿಜನ್ ವ್ಯವಸ್ಥೆಯುಳ್ಳ ಅಂಬುಲೆನ್ಸ್ ನೀಡಿದ್ದಾರೆ. ಚಿತ್ರ ನಿರ್ಮಾಪಕ ಡಾ. ನಿರಂತರ್ ಗಣೇಶ್, ನಟ ಕಾರ್ತಿಕ್, ಮತ್ತು ನಟ ವಿವೇಕ್ ಭಾನುವಾರ ಬ್ಯಾಟರಾಯಪುರದಲ್ಲಿ 10 ಸಾವಿರ ಕೋವಿಡ್ ಮೆಡಿಕಲ್ ಕಿಟ್ ಮತ್ತು ಔಷಧಿಯನ್ನು ವಿತರಣೆ ಮಾಡಿದ್ದಾರೆ.
ಈ ಕುರಿರತಂತೆ ಜೆಕೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಆರೋಗ್ಯ ಭಾರತಿ ಮತ್ತು ಸೇವಾ ಭಾರತಿ ಪರವಾಗಿ ಐರಾವನ್ ಚಿತ್ರ ನಿರ್ಮಾಪಕ ಡಾ. ನಿರಂತರಾ ಗಣೇಶ್ ಅವರೊಂದಿಗೆ ಬ್ಯಾಟರಾಯನಪುರದ ಗ್ರಾಮೀಣ ಜನರ ಸೇವೆಗಾಗಿ ಆಕ್ಸಿಜನ್ ಸಹಿತ ಅಂಬ್ಯುಲೆನ್ಸ್ ದಾನ ಮಾಡಲಾಗಿದೆ. ಹಾಗೂ 10,000 ಕೋವಿಡ್ ಮೆಡಿಕಲ್ ಕಿಟ್‍ನನ್ನು, ಕೋವಿಡ್-19 ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲಾ ಔಷಧಿಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಆರ್‍ಎಸ್‍ಎಸ್ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಎನ್. ತಿಪ್ಪೇಸ್ವಾಮಿ, ಆರೋಗ್ಯ ಭಾರತಿ ಕರ್ನಾಟಕ ರಾಜ್ಯ ಜೆ.ಟಿ ಕಾರ್ಯದರ್ಶಿ ಗಂಗಾಧರನ್, ಐರಾವನ್ ಚಲನಚಿತ್ರ ನಟ ವಿವೇಕ್ ಧ್ವಜಾರೋಹಣ ಮಾಡಿದ ನಂತರ ಕೋವಿಡ್-19 ವೈದ್ಯಕೀಯ ಕಿಟ್‍ಗಳನ್ನು ಸಾರ್ವಜನಿಕರಿಗೆ ವಿತರಿಸಿದರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಇತ್ತೀಚೆಗಷ್ಟೇ ನಟ ರಿಯಲ್ ಸ್ಟಾರ್ ಉಪೇಂದ್ರ ಸಿನಿ ಕಾರ್ಮಿಕರಿಗೆ ಅಗತ್ಯ ವಸ್ತು ಹಾಗೂ ಆಹಾರ ಕಿಟ್ ವಿತರಿಸಿದರು. ನಟ ಶ್ರೀಮುರುಳಿ ಆಸ್ಪತ್ರೆಯಲ್ಲಿರುವ ಕೊರೊನಾ ವಾರಿಯರ್ಸ್‍ಗೆ ಊಟವನ್ನು ಕಳುಹಿಸಿಕೊಟ್ಟಿದ್ದರು. ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ನಟಿ ಶುಭಾ ಪೂಂಜಾ ಕೂಡ ಆಹಾರದ ಕಿಟ್ ವಿತರಿಸಿದರು.
ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್ ರಾಜ್ ಸೇರಿದಂತೆ ನಟ ಜಗ್ಗೇಶ್, ಸುದೀಪ್, ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಛ ಹೀಗೆ ಹಲವಾರು ಸೆಲೆಬ್ರಿಟಿಗಳು ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ.