ಬೆಂಗಳೂರು: ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಅವರು ಜೂನಿಯರ್ ಚಿರು ಆಗಮನದ ನಿರೀಕ್ಷೆಯಲ್ಲಿದ್ದು, ಮನೆಗೆ ಮುದ್ದಾದ ಮಗು ಬರುವ ಮುನ್ನವೇ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ.
ಇತ್ತೀಚೆಗೆಷ್ಟೇ ಮೇಘನಾ ಅವರಿಗೆ ಸೀಮಂತ ಸಮಾರಂಭ ನೆರವಿಸಿದ್ದ ಸರ್ಜಾ ಫ್ಯಾಮಿಲಿ ಅಕಾಲಿಕವಾಗಿ ಕಣ್ಮರೆಯಾಗಿದ್ದ ಕನ್ನಡ ಯುವ ನಟ ಚಿರಂಜೀವಿ ಸರ್ಜಾ ಅವರು ಅಗಲಿಕೆಯ ನೋವಿನಿಂದ ಹೊರ ಬರುವ ಪ್ರಯತ್ನದಲ್ಲಿದೆ. ಇದೇ ವೇಳೆ ಆ ನೋವನ್ನು ಮರೆಸಲು ಜೂನಿಯರ್ ಚಿರುಗೆ ಸ್ವಾಗತವನ್ನು ಕೋರಲು ಸಿದ್ಧರಾಗಿದ್ದಾರೆ.
ಮುದ್ದು ಮಗು ಮನೆಗೆ ಬರುವ ಮುನ್ನವೇ ಪ್ರೀತಿಯ ಅಣ್ಣನ ಮಗುವಿಗೆ ಭರ್ಜರಿ ಸ್ವಾಗತ ಕೋರಲು ಮುಂದಾಗಿರುವ ಧ್ರುವ ಸರ್ಜಾ, ಸುಮಾರು 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಲು ಖರೀದಿ ಮಾಡಿದ್ದಾರೆ. ನವರತ್ನ ಜ್ಯೂವೆಲರ್ಸ್ ನಲ್ಲಿ ಬೆಳ್ಳಿ ತೊಟ್ಟಿಲು ಖರೀದಿ ಮಾಡಲಾಗಿದ್ದು, ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಲಾಗಿದೆ.
ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಪೋಸ್ಟ್ ಮಾಡಿ ಶುಭ ಕೋರಿದ್ದ ಧ್ರುವ ಸರ್ಜಾ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.
ಉಳಿದಂತೆ ಅಕ್ಟೋಬರ್ 4ರಂದು ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು. ಆ ಬಳಿಕ ಸರ್ಜಾ ಕುಟುಂಬ ಕೂಡ ವಿಶೇಷವಾಗಿ ಸೀಮಂತ ಶಾಸ್ತ್ರ ನೆರವೇರಿಸಿತ್ತು.