ಬೆಂಗಳೂರು: ಮಹಾಮಾರಿ ಕೊರೊನಾ ಹೆಚ್ಚಳ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಶಿಕ್ಷಕರು ಮನೆಯಿಂದಲೇ ಕೆಲಸ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸದ್ಯಕ್ಕೆ ಜುಲೈ 31 ವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ರಾಜ್ಯದ ಎಲ್ಲಾ ಶಾಲೆಗಳಿಗೆ ಶಿಕ್ಷಣ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ಎಸ್‍ಎಸ್‍ಎಲ್‍ಸಿ ಮೌಲ್ಯಮಾಪನ ಮಾಡುತ್ತಿರುವ ಶಿಕ್ಷಕರನ್ನ ಹೊರತುಪಡಿಸಿ ಉಳಿದವರು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.
ಶಿಕ್ಷಣ ಇಲಾಖೆ ಕೆಲಸ ನಿಯಮ ವಿಧಿಸಿ ವರ್ಕ್ ಫ್ರಮ್ ಹೋಂಗೆ ಅವಕಾಶ ಮಾಡಿಕೊಟ್ಟಿದೆ. ಯಾವುದೇ ಮಾಹಿತಿ ನೀಡದೆ ಶಿಕ್ಷಕರು ಕೇಂದ್ರ ಸ್ಥಾನವನ್ನು ಬಿಡುವಂತೆ ಇಲ್ಲ. ಜೊತೆಗೆ ಶಿಕ್ಷಕರನ್ನ ಸಂಪರ್ಕಕ್ಕೆ ಪಡೆಯಲು ದೂರವಾಣಿ ಸಂಖ್ಯೆ, ಇಮೇಲ್ ಐಡಿಯನ್ನು ಶಿಕ್ಷಣ ಇಲಾಖೆ ನೀಡುವುದು.
ಅಷ್ಟೇ ಅಲ್ಲದೇ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಶಿಕ್ಷಕರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಆನ್‍ಲೈನ್ ತರಗತಿ ನಡೆಸುವ ಶಿಕ್ಷಕರು ಮನೆಯಿಂದಲೇ ತರಗತಿಯನ್ನು ನಡೆಸಬೇಕು. ಇದಲ್ಲದೇ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕರು ಅಗತ್ಯ ಕೆಲಸ ನಿರ್ವಹಿಸಬೇಕು.
ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗಿದ್ದು, ಗುರುವಾರ ಒಂದೇ ದಿನ 2,344 ಪ್ರಕರಣಗಳು ವರದಿ ಆಗಿವೆ. ಒಟ್ಟಾರೆ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 1032 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.