ನವದೆಹಲಿ : ಜುಲೈ ಮೊದಲ ವಾರದಲ್ಲಿ ಮೋದಿ ಸಂಪುಟ ಪುನರ್ ರಚನೆಯಾಗಲಿದ್ದು, ಹೊಸ ಮುಖಗಳು ಸೇರ್ಪಡೆಯಾಗಲಿದ್ದಾರೆ. ಒಟ್ಟು 27 ಮಂದಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಯಿದ್ದು, ಈ ಪೈಕಿ ರಾಜ್ಯದ ಇಬ್ಬರ ಹೆಸರು ಮಂತ್ರಿ ರೇಸ್ ನಲ್ಲಿದೆ.
ಹಾಲಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರನ್ನು ಕೈ ಬಿಟ್ಟರೂ ಅಚ್ಚರಿ ಇಲ್ಲ ಎಂಬ ಮಾತು ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾಗಿರುವ ಡಿವಿಎಸ್ ಕೈ ಬಿಡುವ ಬಗ್ಗೆ 50:50 ಲೆಕ್ಕಾಚಾರದಲ್ಲಿ ಹೈಕಮಾಂಡ್ ಇದೆ.
ಕೇಂದ್ರದಿಂದ ಡಿವಿಎಸ್ ಕೈ ಬಿಟ್ಟರೆ ಅದೇ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿದೆ. ಡಿವಿಎಸ್ ಸ್ಥಾನಕ್ಕೆ ಇಬ್ಬರು ಒಕ್ಕಲಿಗರಾಗಿರುವ ಬಿಜೆಪಿಯ ಹಿಂದೂ ಫೈರ್ ಬ್ರ್ಯಾಂಡ್ ಗಳ ಹೆಸರು ಹರಿದಾಡುತ್ತಿದೆ. ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮೈಸೂರಿನ ಪ್ರತಾಪ್ ಸಿಂಹ ಹೆಸರು ಮುನ್ನೆಲೆಗೆ ಬಂದಿದೆ. ಇಬ್ಬರಲ್ಲಿ ಅಂತಿಮವಾಗಿ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದ್ದು ಅದೃಷ್ಟ ಯಾರಿಗೆ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ: ಮೋದಿ ಕ್ಯಾಬಿನೆಟ್‍ಗೆ ಸರ್ಜರಿ – 27 ಮಂದಿಗೆ ಮಂತ್ರಿ ಸ್ಥಾನ?
ಈಗಾಗಲೇ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿಯವರು ನಿಧನರಾದ ಹಿನ್ನೆಲೆಯಲ್ಲಿ ಒಂದು ಸ್ಥಾನ ಖಾಲಿಯಾಗಿದೆ. ಈ ಸ್ಥಾನಕ್ಕೆ ಇಬ್ಬರು ಲಿಂಗಾಯತ ಸಂಸದರ ಹೆಸರು ಸ್ಪರ್ಧೆಯಲ್ಲಿದೆ. ರಾಜ್ಯ ರಾಜಕಾರಣದ ದೃಷ್ಟಿಯಿಂದಲೂ ಈ ಸ್ಥಾನ ಮಹತ್ವ ಪಡೆದಿದ್ದು, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಶಿವಮೊಗ್ಗ ಸಂಸದ ರಾಘವೇಂದ್ರಗೆ ಸಿಗುತ್ತಾ ಸ್ಥಾನ ಎಂಬ ಪ್ರಶ್ನೆ ಎದ್ದಿದೆ.
ಇಷ್ಟೇ ಅಲ್ಲದೇ ದಲಿತ ಸಮುದಾಯವನ್ನೂ ಸೆಳೆಯಲು ಚರ್ಚೆ ನಡೆಯುತ್ತಿದೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕಾರಣಕ್ಕೂ ಜಾಧವ್ ಅವರಿಗೂ ಸ್ಥಾನ ಸಿಗಬಹುದು ಎಂಬ ವಿಚಾರ ಚರ್ಚೆಯಾಗುತ್ತಿದೆ.