– ನಮಗೆ ಭಕ್ತರ ಆರೋಗ್ಯ ಮುಖ್ಯ ಎಂದ ಸ್ವಾಮೀಜಿ
ಉಡುಪಿ: ಸರ್ಕಾರ ಜೂನ್ 8ರ ನಂತರ ದೇವಸ್ಥಾನ ತೆರೆಯುವ ಅವಕಾಶ ಕೊಟ್ಟಿದೆ. ಆದರೆ ಉಡುಪಿ ಕೃಷ್ಣನ ದರ್ಶನ ಸಿಗೋದಕ್ಕೆ ಜುಲೈ ತನಕ ಕಾಯಬೇಕಾಗಿದೆ. ಯಾಕಂದರೆ ಉಡುಪಿ ಕೃಷ್ಣ ಮಠ ಸೋಮವಾರ ಓಪನ್ ಆಗಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದಮಾರು ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ, ನಾವು ಇನ್ನೂ 20 ರಿಂದ 30 ದಿನ ಕಾಯುತ್ತೇವೆ. ಮುಂದಿನ ಬೆಳವಣಿಗೆಗಳನ್ನು ನೋಡಿ ದರ್ಶನ ವ್ಯವಸ್ಥೆ ಮಾಡುತ್ತೇವೆ. ದರ್ಶನ ಆರಂಭಿಸಿದರೆ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ. ಹೀಗಾಗಿ ನಮಗೆ ಭಕ್ತರ ಮತ್ತು ಕೃಷ್ಣ ಮಠದ ಸಿಬ್ಬಂದಿ ಆರೋಗ್ಯ ಮುಖ್ಯ ಎಂದರು.
ಕೃಷ್ಣಮಠದಲ್ಲಿ ಬಹಳ ಹಿಂದಿನಿಂದ ನಡೆದುಕೊಂಡ ಪರಂಪರೆ ಇದೆ. ಯತಿಗಳೇ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯ ಇದೆ. ಯಾರಿಗೂ ಸಮಸ್ಯೆ ಆಗಬಾರದು. ಹೀಗಾಗಿ ಸೋಮವಾರ ನಾವು ದೇವಸ್ಥಾನವನ್ನು ತೆರೆಯುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.
ಶ್ರೀಕೃಷ್ಣ ಮಠಕ್ಕೆ ಪ್ರತಿದಿನ 1 ಲಕ್ಷ ರೂಪಾಯಿಯಷ್ಟು ಖರ್ಚು ಇದೆ. ಲಾಕ್‍ಡೌನ್ ಸಂದರ್ಭದಲ್ಲಿ ಕೂಡ ನಮ್ಮೆಲ್ಲಾ ಸಿಬ್ಬಂದಿಗೆ ಸಂಬಳ ಕೊಡುತ್ತಿದ್ದೇವೆ. ಅದೇನೆ ಇದ್ದರೂ ಮಠ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ. ಕೊರೊನಾ ಸೋಂಕು ಶೀಘ್ರ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ಕಳೆದ ಎರಡು ತಿಂಗಳು ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದು ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.