– ಪರೀಕ್ಷೆ ಬೇಡ ಅಂತಿದ್ದಾರೆ ಪೋಷಕರು
ಬೆಂಗಳೂರು; ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಿಶ್ಚಿತವಾಗಿದ್ದು, ಸೋಂಕು ಇಳಿಯುತ್ತಿದ್ದಂತೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ರ್ನಿಧರಿಸಿದೆ.
ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಯಾವಾಗ ನಡೆಯಲಿದೆ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ..?, ಪರೀಕ್ಷೆಯ ಸ್ವರೂಪದಲ್ಲಿ ಬದಲಾವಣೆ ಮಾಡುತ್ತಾ ಶಿಕ್ಷಣ ಇಲಾಖೆ..?, ಪರೀಕ್ಷಾ ಅವಧಿಯಲ್ಲಿ ಕಡಿತ ಮಾಡುತ್ತಾ ಎಂಬ ಪ್ರಶ್ನೆಗಳು ಮೂಡಿವೆ.
Advertisement
Advertisement
ಜುಲೈನಲ್ಲಿ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಜುಲೈ ಕೊನೆ ವಾರ ಅಥವಾ ಆಗಸ್ಟ್ ನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷಾ ಕೇಂದ್ರಗಳ ಸಿದ್ಧತೆ ಬಹುತೇಕ ಮುಕ್ತಾಯವಾಗಿದ್ದು, ಮೊದಲಿಗೆ ದ್ವಿತೀಯ ಪಿಯುಸಿ, ಆ ಬಳಿಕ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ.
Advertisement
Advertisement
ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲೇಬೇಕೆಂದು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಪರೀಕ್ಷೆಗಾಗಿ ಕೆಲವೊಂದಿಷ್ಟು ಲೆಕ್ಕಾಚಾರಗಳನ್ನು ಹಾಕಿಕೊಂಡಿದೆ. ಸೋಂಕು ಇಳಿಕೆ ಬಳಿಕ ಪರೀಕ್ಷೆ ನಡೆಸಲು ಸಿದ್ಧತೆ. ಸೋಂಕು ಇಳಿದ ಬಳಿಕ 15-20 ದಿನ ಸಿದ್ಧತೆಗಾಗಿ ಮಕ್ಕಳಿಗೆ ಕಾಲಾವಕಾಶ ನೀಡುವುದು. ಈಗಿರುವ 3 ಗಂಟೆ ಪರೀಕ್ಷಾ ಅವಧಿ ಕಡಿತಗೊಳಿಸುವುದು. ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಬದಲಾವಣೆ ಮಾಡುವುದು. ಸರಳ ಪ್ರಶ್ನೆಗಳಿರುವ ಪ್ರಶ್ನೆಪತ್ರಿಕೆಗಳನ್ನು ತಯಾರಿಸುವುದು. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗರಿಷ್ಠ 15 ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡುವುದು. ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಿಕೊಳ್ಳುವುದು. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡುವುದು.
ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸ್ಬೇಕಾ..? ಬೇಡ್ವಾ..? ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ನಡೆಸಲೇಬೇಕು ಎಂದು ವಿದ್ಯಾರ್ಥಿಗಳು, ಪೋಷಕರು ಒತ್ತಾಯಿಸಿದ್ದರು. ಎರಡೂ ಪರೀಕ್ಷೆಗಳನ್ನು ನಡೆಸಿ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವರು ಭೇಷ್ ಅನ್ನಿಸಿಕೊಂಡಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಬೇರೆ ಇದೆ. ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಆಗಿಲ್ಲ. ಆನ್‍ಲೈನ್ ಶಿಕ್ಷಣ ಎಲ್ಲರಿಗೂ ಸಿಕ್ಕಿಲ್ಲ. ಶಾಲೆಗಳಲ್ಲಿ ತರಗತಿ ಕೆಲವು ದಿನ ನಡೆದರೂ 2ನೇ ಅಲೆ ಹಿನ್ನೆಲೆಯಲ್ಲಿ ಮತ್ತೆ ತರಗತಿಗಳು ಬಂದ್ ಆಗಿವೆ.
ಕೋವಿಡ್ 2ನೇ ಅಲೆ ಅಬ್ಬರದ ನಡುವೆ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬೇಡ ಅನ್ನೋದು ಬಹುತೇಕ ಪೋಷಕರ ಅಭಿಪ್ರಾಯವಾಗಿದೆ. ಸೋಂಕು ನಿಯಂತ್ರಣಕ್ಕೆ ಬಂದ ಬಳಿಕವಷ್ಟೇ ಪರೀಕ್ಷೆ ನಡೆಸಿ ಎನ್ನುವುದು ಕೆಲವರ ವಾದ. ಪರೀಕ್ಷೆ ತಡವಾದರೂ ಪರವಾಗಿಲ್ಲ ಎನ್ನುವುದು ಕೆಲವರ ಅನಿಸಿಕೆ. ಪರೀಕ್ಷೆಗಿಂತ ಜೀವ ಮುಖ್ಯ ಅನ್ನೋದು ಕೆಲವು ಪೋಷಕರ ಮಾತು. ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಹೀಗೆ ಉನ್ನತ ಶಿಕ್ಷಣಕ್ಕೆ, ನೀಟ್, ಸಿಇಟಿಯಂತ ಪ್ರವೇಶ ಪರೀಕ್ಷೆಗಳಿಗೆ ಪಿಯುಸಿ ಪರೀಕ್ಷೆ ಅನಿವಾರ್ಯ ಆಗಿರುವ ಕಾರಣ ಪರೀಕ್ಷೆ ನಡೆಸಿ ಅನ್ನೋದು ಕೆಲವು ವಿದ್ಯಾರ್ಥಿಗಳ ವಾದ. ಕೊರೊನಾ ಭಯ ಇದೆ, ಈಗ ಪರೀಕ್ಷೆ ಬೇಡ, ಸೋಂಕು ಕಡಿಮೆ ಆದ ಬಳಿಕ ಪರೀಕ್ಷೆ ನಡೆಸಿ ಅಂತಿದ್ದಾರೆ ಕೆಲವು ವಿದ್ಯಾರ್ಥಿಗಳು.
ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುಸುವುದರ ಬಗ್ಗೆ ಶಿಕ್ಷಣ ತಜ್ಞರು, ಉಪನ್ಯಾಸಕರ ಸಂಘದವರು ಪರೀಕ್ಷೆ ನಡೆಸುವುದಕ್ಕೆ ಆತುರ ಬೇಡ. ಈ ಶೈಕ್ಷಣಿಕ ವರ್ಷದಲ್ಲಿ ಪಠ್ಯಬೋಧನೆಯಲ್ಲಿ ವ್ಯತ್ಯಾಸ ಆಗಿದೆ. ಹೀಗಾಗಿ ಪಬ್ಲಿಕ್ ಪರೀಕ್ಷೆ ಬದಲು ಶಾಲಾ-ಕಾಲೇಜು ಮಟ್ಟದಲ್ಲೇ ಪರೀಕ್ಷೆ ನಡೆಸಿ. ಸೋಂಕು ಇಳಿದ ಬಳಿಕವಷ್ಟೇ ಪರೀಕ್ಷೆ ನಡೆಸಿ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್, ಥರ್ಮಲ್‍ಸ್ಕ್ರೀನಿಂಗ್‍ನಂತಹ ಮುನ್ನೆಚ್ಚರಿಕೆ ಕೈಗೊಳ್ಳಿ. ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಿ. ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ನಿಯೋಜಿಸಿ ಎಂದು ಹೇಳಿದ್ದಾರೆ.