ಮಡಿಕೇರಿ: ನಾಡಿನ ಜೀವ ನದಿ ಕಾವೇರಿ ಬತ್ತುತ್ತಿದ್ದು, ಕಾವೇರಿ ನೀರನ್ನೇ ಆಶ್ರಯಿಸಿರುವ ಜಿಲ್ಲೆಗಳು ಕುಡಿಯುವ ನೀರಿನ ಹಾಹಾಕಾರ ಎದುರಿಸುವ ಸ್ಥಿತಿ ಎದುರಾಗಿದೆ.
ಕೊಡಗಿನಲ್ಲಿ ಹುಟ್ಟಿ ನಾಲ್ಕು ಜಿಲ್ಲೆಗಳಲ್ಲಿ ಹರಿದು ನಾಡಿನ ಹಲವು ಜಿಲ್ಲೆಗಳ ಜೀವಜಲವಾಗಿರುವ ಕಾವೇರಿ ಬತ್ತುತ್ತಿದೆ. ದಕ್ಷಿಣ ಕಾಶ್ಮೀರ ಎಂದೆನಿಸಿಕೊಂಡಿದ್ದ ಕೊಡಗಿನಲ್ಲಿ ವರ್ಷದ ನಾಲ್ಕೈದು ತಿಂಗಳು ನಿರಂತರ ಮಳೆ ಸುರಿಯುತ್ತದೆ. ಮೂರು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಕಾವೇರಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗೋದು, ಬೇಸಿಗೆ ಬಂತೆಂದರೆ ನೀರು ಕಡಿಮೆಯಾಗೋದು ಕಾಮನ್ ಆಗಿತ್ತು. ಆದರೆ ಈ ಬಾರಿ ಕಳೆದ 50 ರಿಂದ 60 ವರ್ಷಗಳಲ್ಲೇ ನೋಡಿರದಷ್ಟು ಪ್ರಮಾಣದಲ್ಲಿ ಕಾವೇರಿ ನದಿ ಬತ್ತಿದೆ. ಸಾಕಷ್ಟು ಕಡೆಗಳಲ್ಲಿ ಕಾವೇರಿ ನದಿಯಲ್ಲಿ ನೀರು ಅಲ್ಲಲ್ಲೇ ತಗ್ಗು ಪ್ರದೇಶಗಳಲ್ಲಿ ಮಾತ್ರವೇ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುವುದನ್ನು ಬಿಟ್ಟರೆ ಉಳಿದೆಡೆ ನದಿಯ ಒಡಲು ಬರಿದಾಗಿದ್ದು, ಕಲ್ಲುಬಂಡೆಗಳೇ ಕಾಣುತ್ತಿವೆ. ಹೀಗಾಗಿ ಕುಡಿಯಲು ಮತ್ತು ಕೃಷಿಗೆ ಕಾವೇರಿ ನೀರನ್ನೇ ನಂಬಿಕೊಂಡಿದ್ದ ನಾಲ್ಕೈದು ಜಿಲ್ಲೆಗಳ ಲಕ್ಷಾಂತರ ಜನರು ಸಮಸ್ಯೆಗೆ ಸಿಲುಕುವ ಸ್ಥಿತಿ ಎದುರಾಗಿದೆ.
ಬೇರೆ ಜಿಲ್ಲೆಯ ಮಾತಿರಲಿ, ಕಾವೇರಿ ತವರು ಕೊಡಗಿನಲ್ಲೇ ಕುಡಿಯುವ ನೀರಿಗೆ ಆಹಾಕಾರ ಎದುರಾಗುವ ದಿನಗಳು ಹತ್ತಿರವಾಗಿವೆ. ಕೊಡಗಿನ ಕುಶಾಲನಗರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹುಣುಸೂರು ಸೇರಿದಂತೆ ಹಲವು ಪಟ್ಟಣಗಳಲ್ಲಿ ಈಗಾಗಲೇ ಸ್ಥಳೀಯ ಆಡಳಿತಗಳು ಕಾವೇರಿ ನದಿಗೆ ಮರಳಿನ ಮೂಟೆಗಳಿಂದ ಕಟ್ಟೆಕಟ್ಟಿ ನೀರು ಸಂಗ್ರಹಿಸಿ ಪಟ್ಟಣಗಳಿಗೆ ಪೂರೈಸುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾನ್ಯವಾಗಿ ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗುವುದಾದರೂ ಅದು ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಲ್ಲಿ ಕಡಿಮೆಯಾಗುತಿತ್ತು. ಆದರೆ ಈ ಬಾರಿ ಏಪ್ರಿಲ್ ಆರಂಭದಲ್ಲೇ ಕಾವೇರಿ ಒಡಲು ಬಹುತೇಕ ಬರಿದಾಗಿರುವುದು ಆತಂಕ ಮೂಡಿಸಿದೆ.
ಇದು ಕೇವಲ ಕೊಡಗಿಗೆ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಮೈಸೂರು ಮಂಡ್ಯ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಗೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಉಕ್ಕಿ ಹರಿದು ಪ್ರವಾಹ ತಂದೊಡ್ಡುವ ಕಾವೇರಿ ಈ ಬಾರಿಯ ಬೇಸಿಗೆ ಆರಂಭದಲ್ಲಿ ಬಹುತೇಕ ಬತ್ತಿಹೋಗುವುದಕ್ಕೆ ಕಾರಣ ಕೊಡಗಿನ ಅಂತರ್ಜಲದಲ್ಲಿ ಕಡಿಮೆಯಾಗಿರೋದು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೊಡಗಿನ ಅಂತರ್ಜಲ ಕಳೆದ 10 ವರ್ಷಗಳಲ್ಲಿ 2.9 ಮೀಟರ್ ಕಡಿಮೆಯಾಗಿದೆ. ಮತ್ತೊಂದೆಡೆ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದರೆ, ಸಾಕಷ್ಟು ಕೆರೆಗಳೇ ಇಲ್ಲದಂತೆ ಆಗಿವೆ. ಹೀಗಾಗಿ ಕೊಡಗಿನಲ್ಲಿ ಮಳೆಗಾಲದಲ್ಲಿ ಪ್ರವಾಹ ಎದುರಾಗುತ್ತಿದ್ದರೆ, ಬೇಸಿಗೆಯಲ್ಲಿ ಕಾವೇರಿ ಬತ್ತಿಹೋಗುತ್ತಿದೆ.