ಜೀವನಾಡಿ ಹೇಮೆಯ ಒಡಲು ಸೇರುತ್ತಿದೆ ಯುಜಿಡಿ ಕಲುಷಿತ ನೀರು

Public TV
1 Min Read
Hemavati Canal 5

ತುಮಕೂರು: ತುಮಕೂರು-ತಿಪಟೂರು ನಗರದ ಯುಜಿಡಿ ಕಲುಷಿತ ನೀರು ಹೇಮಾವತಿ ನಾಲೆಗೆ ಹರಿಯುತ್ತಿದೆ. ಜಿಲ್ಲೆಯ ಜನರ ಜೀವನಾಡಿ ಹೇಮಾವತಿ ನಾಲೆ ನೀರು ಮಲಿನವಾಗ್ತಿದೆ.

ಹಾಸನ ಜಿಲ್ಲೆಯ ಗೋರೂರು ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಯ ವಿವಿಧ ಕೆರೆಗಳಿಗೆ ನಾಲೆ ಮೂಲಕ ಹರಿಯುತ್ತಿರುವ ನೀರು ತಿಪಟೂರು ತಾಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮಾಲಿನ್ಯಗೊಳ್ಳುತ್ತಿದೆ.

Hemavati Canal 3 medium

ತಿಪಟೂರು ನಗರದ ಹೃದಯಭಾಗದಲ್ಲಿರುವ ಅಮಾನಿಕೆರೆ ತುಂಬಿ ಹರಿಯುವ ನೀರು ರಾಜಕಾಲುವೆ ಮೂಲಕ ಗೊರಗೊಂಡನಹಳ್ಳಿ, ಕೊಪ್ಪ, ಹುಲ್ಲುಕಟ್ಟೆ ಮಾರ್ಗವಾಗಿ ಹೇಮಾವತಿ ನಾಲೆ ಹಾದು ಈಚನೂರು ಕೆರೆ ಸೇರುತ್ತದೆ. ಈ ರಾಜ ಕಾಲುವೆಯಲ್ಲಿ ಹಲವು ವರ್ಷಗಳಿಂದ ತಿಪಟೂರು ನಗರದ ಯುಜಿಡಿ ಕೊಳಚೆ ನೀರು ಈಚನೂರು ಕೆರೆಗೆ ಬಂದು ಸೇರುತ್ತಿದೆ. ಇದೇ ಕೆರೆಯಿಂದ ಹಾಸನ ಜಿಲ್ಲೆಯ ಅರಸೀಕೆರೆ, ತಿಪಟೂರು ನಗರಕ್ಕೆ ನೀರು ಸರಬರಾಜು ಮಾಡಲಾಗ್ತಿದೆ. ತಿಪಟೂರು ನಗರದ ಜನರು ತಾವು ಬಳಸಿದ ಕಲುಷಿತ ನೀರನ್ನ ತಾವೇ ತಮಗರಿವಿಲ್ಲದಂತೆ ಕುಡಿಯುತ್ತಿದ್ದಾರೆ. ಇದೀಗ ಕಲುಷಿತ ನೀರು ನಾಲೆ ಸೇರುತ್ತಿದ್ದು, ತುಮಕೂರು ಜನರು ಇದೇ ನೀರನ್ನ ಕುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.

Hemavati Canal 4 medium

ನಗರದ ಯುಜಿಡಿ ಕೊಳಚೆ ನೀರು ಹಾಗೂ ಚರಂಡಿಯ ನೀರು ರಾಜಕಾಲುವೆ ಮೂಲಕ ಹಳ್ಳಗಳ ಮೂಲಕ ಹರಿದು ನೇರವಾಗಿ ಈಚನೂರು ಬಳಿ ಹೇಮಾವತಿ ನಾಲೆ ಸೇರುತ್ತಿದೆ. ನಗರದ ತ್ಯಾಜ್ಯ ಹಾಗೂ ವಿಷಪೂರಿತ ನೀರು ನಾಲೆಗೆ ಸೇರಿ ನಾಲೆ ಪ್ರದೇಶ ವ್ಯಾಪ್ತಿಯಲ್ಲಿ ಗ್ರಾಮಗಳಿಗೆ ಕೃಷಿ ಹಾಗೂ ಕುಡಿಯಲು ಬಳಕೆಯಾಗುತ್ತದೆ. ತುಮಕೂರು ನಗರ ಸೇರಿದಂತೆ ಗ್ರಾಮಾಂತರದ ಜನರೂ ಸಹ ಇದೆ ನೀರನ್ನ ಬಳಸಬೇಕಿದೆ.

Hemavati Canal 2 medium

ತಿಪಟೂರು ನಗರಸಭೆಯ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಡಳಿತ ತ್ಯಾಜ್ಯದ ನೀರು ಹೇಮೆ ಒಡಲು ಸೇರದಂತೆ ಕ್ರಮವಹಿಸಬೇಕು ಸಾರ್ವಜನಿಕರಿಗೆ ಶುದ್ದ ಹೇಮಾವತಿ ನೀರು ದೊರೆಯುವಂತೆ ಮಾಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *