ಬೆಂಗಳೂರು: ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ, ಸಮಾಜದ ಸ್ವಾಸ್ಥ್ಯ-ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮತಾಂಧ ಜಿಹಾದಿಗಳ ಈ ದುಷ್ಕೃತ್ಯಕ್ಕೆ ಕಾಂಗ್ರೆಸ್ ನಾಯಕರು ಸೇರಿಕೊಂಡಿರುವುದು ಅವರ ವಿಕೃತ ಮನಸ್ಥಿತಿಯನ್ನು ತೆರೆದಿಡುತ್ತದೆ. ಈ ರೀತಿಯ ಫೇಕ್ ನ್ಯೂಸ್ ಗಳ ಮೂಲಕ ಸಮಾಜದ ಸಾಮರಸ್ಯ ಕದಡುತ್ತಿರುವ ಎಲ್ಲಾ ಸಮಾಜ ವಿರೋಧಿಗಳಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
https://twitter.com/ShobhaBJP/status/1264570893688205313
ಆಗಿದ್ದು ಏನು?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಕಲ್ಲಡ್ಕ ಸಮೀಪದ ಕೊಳಕೀರು ನಿವಾಸಿ ನಿಶಾಂತ್ ಹಾರಿದ್ದ. ನಿಶಾಂತ್ ಹಾರಿದ್ದನ್ನು ನೋಡಿ ರಂಜಾನ್ ಹಬ್ಬದ ಸಡಗರದಲ್ಲಿದ್ದ ಮುಸ್ಲಿಂ ಯುವಕರು, ನದಿಗೆ ಜಿಗಿದು ಆತನನ್ನು ಮೇಲೆ ತಂದು ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಶಾಂತ್ ಸಾವನ್ನಪ್ಪಿದ್ದಾನೆ.
https://twitter.com/ShobhaBJP/status/1264587090496544773
ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ನಿಶಾಂತ್ ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿರುವ ಸಮಯದಲ್ಲೇ ಕಿಡಿಗೇಡಿಗಳು ಶೋಭಾ ಕರಂದ್ಲಾಜೆಯವರೇ ಟ್ವೀಟ್ ಮಾಡಿದಂತೆ ಸಾಲನ್ನು ಎಡಿಟ್ ಮಾಡಿದ್ದರು. “ಜಿಹಾದಿ ಹಿಂದೂ ಸಂಘಟನೆಯಿಂದ ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಹತ್ಯೆ ನಡೆದಿದೆ ಎಂಬ ಮಾಹಿತಿ ಬಂದಿದೆ. ಕೂಡಲೇ ಆ ಜಿಹಾದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ” ಎಂದು ಈ ನಕಲಿ ಟ್ವೀಟ್ ನಲ್ಲಿ ಬರೆಯಲಾಗಿತ್ತು. ಈ ಟ್ವೀಟ್ ಗೆ ಸಂಬಂಧಿಸಿದಂತೆ ಕರಂದ್ಲಾಜೆ ಪ್ರತಿಕ್ರಿಯಿಸಿ ನಾನು ಈ ಟ್ವೀಟ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
https://twitter.com/ShobhaBJP/status/1264581903459463168