ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಕೊಡಗು ಜಿಲ್ಲೆಗೂ ಒಂದು ಮಂತ್ರಿಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇದ್ದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ಕೈಯಿತಪ್ಪಿ ಹೋಗಿದೆ. ಈ ಕುರಿತಾಗಿ ಮಾಧ್ಯಮದವರೊಂದಿಗೆ ಅಪ್ಪಚ್ಚು ರಂಜನ್ ಮಾತಣಾಡಿದ್ದಾರೆ.
ನನ್ನ ಬೆನ್ನಿಗೆ ಬಿದ್ದ ಬೇತಾಳದಿಂದ ನನಗೆ ಸಚಿವಸ್ಥಾನ ಸಿಗಲಿಲ್ಲ. ನಾನೇ ಬೆಳೆಸಿದ ಬೇತಾಳ ನನ್ನ ತಲೆಗೆ ಹೊಡೆಯುತ್ತಿದೆ. ಆ ಬೇತಾಳವನ್ನು ಬೆಳೆಸಬಾರದೆಂದು ನನಗೆ ಗೊತ್ತಿರಲಿಲ್ಲ, ಈಗ ಬೇತಾಳ ಎತ್ತರಕ್ಕೆ ಬೆಳೆದು ನನಗೆ ಸಮಸ್ಯೆ ಆಗಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಕ್ರೋಶ ಹೋರ ಹಾಕಿದ್ದಾರೆ. ಇದನ್ನೂ ಓದಿ: ಯಾಕ್ರೀ ಇಂತಹವರಿಗೆಲ್ಲ ಕೆಲಸ ಕೊಡ್ತೀರಾ, ನಿಮ್ಮನ್ನೆಲ್ಲ ಬಲಿ ಹಾಕ್ತೀವಿ- ರೇವಣ್ಣ ಆಕ್ರೋಶ
ಜಿಲ್ಲೆಯ ಜನ ಪ್ರತಿನಿಧಿಯೊಬ್ಬರು ಹಸ್ತಕ್ಷೇಪ ಮಾಡಿದ ಪರಿಣಾಮದಿಂದಾಗಿ ಈ ಬಾರೀ ಸಚಿವಸ್ಥಾನ ಸಿಕ್ಕಿಲ್ಲ. ಹೈಕಮಾಂಡ್‍ನ ಮೂವರಿಂದ ನನಗೆ ಕರೆ ಬಂದಿತ್ತು. ಸಚಿವಸ್ಥಾನ ಸಿಗೋದು ಖಚಿತ ಅಂತ ಹೈಕಮಾಂಡ್ ಹೇಳಿದ್ದರು. ಆದರೆ ಪಟ್ಟಿ ಬೆಂಗಳೂರಿಗೆ ಬಂದಾಗ ಎಲ್ಲವೂ ಕೈತಪ್ಪಿಹೋಯಿತು. ಅದಕ್ಕೆ ಈ ಬೇತಾಳವೇ ಕಾರಣ. ಸಚಿವ ಸಂಪುಟದಲ್ಲಿ ಜಿಲ್ಲಾವಾರು ಜಾತಿವಾರು ಸಾಮಾಜಿಕ ನ್ಯಾಯ ಇರುವುದಾಗಿ ಹೇಳಿದ್ರು. ಆದರೆ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯವನ್ನೇ ಕೊಟ್ಟಿಲ್ಲ. ಕೊಡಗನ್ನು ಟೇಕ್ ಈಸ್ ಇಟ್ ಗ್ರ್ಯಾಂಟೆಡ್ ಎಂದು ಮಾಡಿಕೊಳ್ಳಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಎಂಟು ಚುನಾವಣೆ ನಡೆದಿವೆ. ಅದರಲ್ಲಿ ಬಿಜೆಪಿ ಏಳು ಬಾರಿ ಸೋತಿದೆ ಮಡಿಕೇರಿಯಲ್ಲಿ ಮಾತ್ರ ಭರ್ಜರಿಯಾಗಿ ಗೆದ್ದಿದ್ದೇವೆ. ಹೀಗೆ ಗೆಲ್ಲಿಸಿದ್ದೇ ತಪ್ಪಾಯಿತಾ? ಜಿಲ್ಲಾವಾರು ಪ್ರಾತಿನಿಧ್ಯ ಕೊಡುತ್ತೇವೆ ಎಂದಿದ್ದರು. ಆದರೆ ಬೆಂಗಳೂರಿಗೆ ಎಂಟು ಸ್ಥಾನ ಮಂಗಳೂರಿಗೆ 3 ಸ್ಥಾನ, ಶಿವಮೊಗ್ಗಕ್ಕೆ ಮೂರುಸ್ಥಾನ ಬೆಳಗಾವಿಗೆ ಐದು ಸ್ಥಾನ ಕೊಡಲಾಗಿದೆ. ಕೊಡಗನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಬೇಸರ ಹೊರಹಾಕಿದರು.
ಸಂಸದರು ಕೂಡ ಇದರ ಬಗ್ಗೆ ಮೌನ ವಹಿಸಿದ್ಯಾಕೆ ?ಅವರಿಗೆ ಜಿಲ್ಲೆಯಿಂದ 80 ಸಾವಿರ ಮತಗಳ ಮುನ್ನಡೆಯನ್ನು ನೀಡಿದ್ದೆವು. ಅವರಾದರೂ ಹೈಕಮಾಂಡ್ ಜೊತೆಗೆ ಮಾತನಾಡಬಹುದಿತ್ತು. ಜಿಲ್ಲೆಯಲ್ಲಿ ನಾಲ್ಕೈದು ಬಾರಿ ಗೆದ್ದವರಿದ್ದಾರೆ ಎಂದು ಹೇಳಬಹುದಿತ್ತು. ಕೊಡಗು ಜಿಲ್ಲೆಯನ್ನು ಇಷ್ಟೊಂದು ಕಡೆಗಣಿಸಿದ್ದು, ಸರಿಯಲ್ಲ. ಇದರಿಂದ ನನಗೆ ಮತ್ತು ಜಿಲ್ಲೆಯ ಜನರಿಗೆ ತೀವ್ರ ಬೇಸರವಾಗಿದೆ ಮುಂದಿನ ಚುನಾವಣೆಗಳಲ್ಲಿ ಖಂಡಿತಾ ಇದರಿಂದ ಪಕ್ಷಕ್ಕೆ ನಷ್ಟವಾಗಲಿದೆ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲಿ ಒಳ ಜಗಳ ಕಂಡುಬರುತ್ತಿದ್ದು, ಕೊಡಗಿನಲ್ಲೂ ಇಬ್ಬರ ಶಾಸಕರ ನಡುವೆ ಆಂತರಿಕ ಒಳಜಗಳಕ್ಕೆ ಕಾರಣವಾಗುತ್ತಿದೆ.