ಯಾದಗಿರಿ: ಇಲ್ಲಿನ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ವಿದ್ಯುತ್ ಕಟ್ ಆಗಿದ್ದು, ಸೋಂಕಿತರು ನರಕಯಾತನೆ ಅನುಭವಿಸುತ್ತಿದ್ದಾರೆ.
ಯಾದಗಿರಿ ತಾಲೂಕಿನ ಮುದ್ನಾಳ್ ಬಳಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ಗಂಟೆಗಳಿಂದ ಕರೆಂಟ್ ಬರದಿದ್ದರಿಂದ ಆಕ್ಸಿಜನ್, ವೆಂಟಿಲೆಟರ್ ಬಂದ್ ಆಗಿ ಸೋಂಕಿತರು ಪರದಾಡುತ್ತಿದ್ದಾರೆ.
ಏಕಾಏಕಿ ವಿದ್ಯುತ್ ಕಟ್ ಆಗಿದ್ದಕ್ಕೆ ಸೋಂಕಿತರ ಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಬಂಧಿಕರು ಕೈಯಲ್ಲಿ ಟವೆಲ್ ಹಿಡಿದು ಗಾಳಿ ಬೀಸುತ್ತಿದ್ದಾರೆ. ಇನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕರೆಂಟ್ ಹೋದ್ರೆ ಜನರೆಟರ್ ವ್ಯವಸ್ಥೆ ಇದೆ, ಆದ್ರೆ ಡೀಸೆಲ್ ಇಲ್ಲ.
ಜಿಲ್ಲಾಡಳಿತದ ದೊಡ್ಡ ಎಡವಟ್ಟಿಗೆ ಸೋಂಕಿತರ ಸಂಬಂಧಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಒಟ್ಟಿನಲ್ಲಿ ಕರೆಂಟ್ ಇಲ್ಲದೆ ಸೋಂಕಿತರು ನರಕಯಾತನೆ ಅನುಭವಿಸುತ್ತಿದ್ದು, ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.