ಚಿತ್ರದುರ್ಗ: ಜಾತ್ರೆ ನಡೆಸದಂತೆ ಜಿಲ್ಲಾಡಳಿತ ಹೊರಡಿಸಿದ್ದ ಆದೇಶಕ್ಕೆ ಭಕ್ತರು ಡೋಂಟ್ ಕೇರ್ ಎಂದಿರುವ ಘಟನೆ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನಡೆದಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಗಸ್ಟ್ 24 ರಿಂದ 26 ರವರೆಗೆ ಐತಿಹಾಸಿಕ ಹಿನ್ನೆಲೆಯ ಗೌರಸಂದ್ರ ಮಾರಮ್ಮ ಜಾತ್ರೆಯನ್ನು ರದ್ದುಗೊಳಿಸಿ ಚಿತ್ರದುರ್ಗ ಡಿಸಿ ಕವಿತ ಮನ್ನಿಕೇರಿ ಆದೇಶ ಹೊರಡಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶ, ಕೋವಿಡ್ ಸೋಂಕಿನ ಭೀತಿಯನ್ನು ಲೆಕ್ಕಿಸದ ಭಕ್ತರು ದೇವಿಗೆ ಹರಕೆ ತೀರಿಸಿದ್ದಾರೆ.
Advertisement
Advertisement
ಗೌರಸಮುದ್ರ ಗ್ರಾಮಕ್ಕೆ ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆಗಳಿಂದ ಪೊಲೀಸರ ಕಣ್ತಪ್ಪಿಸಿ ಧಾವಿಸಿದ್ದ ಇಂದು ಬೆಳಗಿನ ಜಾವ ಆಗಮಿಸಿದ ನೂರಾರು ಭಕ್ತರು ಬೇವಿನ ಸೀರೆ ಹರಕೆ ತೀರಿಸಿದ್ದಾರೆ. ಪ್ರತಿವರ್ಷದಂತೆ ಯಥಾಸ್ಥಿತಿ ದೇವಿಯ ದರ್ಶನ ಪಡೆದಿರುವ ಭಕ್ತರು ನಸುಕಿನ ಜಾವವೇ ದೇವಿಯ ಪೂಜಾ ಕೈಂಕರ್ಯ ನೆರವೇರಿಸಿ ಜಿಲ್ಲಾಡಳಿತ ಆದೇಶವನ್ನು ಉಲ್ಲಂಘಿಸಿದ್ದಾರೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.