ಚಿಕ್ಕಮಗಳೂರು: ಮಳೆ ಅತ್ತ ಜೋರಾಗೂ ಸುರಿಯುತ್ತಿಲ್ಲ. ಇತ್ತ ನಿಲ್ತಾನೂ ಇಲ್ಲ. ಬೆಳಗ್ಗೆಯಿಂದ ಒಂದೇ ಸಮನೆ ಸುರಿಯುತ್ತಿರೋ ತುಂತುರ ಮಳೆಗೆ ಜಿಲ್ಲೆಯ ಜನ ಹೈರಾಣಾಗಿದ್ದಾರೆ. ತೌಕ್ತೆ ಚಂಡಮಾರುತದ ಎಫೆಕ್ಟ್ ನಿಂದ ಇಂದು ಇಡೀ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೆಳಗ್ಗೆಯಿಂದಲೂ ಸಾಧಾರಣ ಮಳೆಯಾಗುತ್ತಿದೆ.
ಬೆಳ್ಳಂಬೆಳಗ್ಗೆಯೇ ಆರಂಭವಾದ ಮಳೆ ಹತ್ತು-ಇಪ್ಪತ್ತು ನಿಮಿಷಗಳ ಕಾಲ ಬಿಡುವ ನೀಡುತ್ತಾ ಬೆಳಗ್ಗೆಯಿಂದ ಒಂದೇ ಸಮನೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ನಿಡುವಾಳೆ, ಗಬ್ಗಲ್, ಜಾವಳಿ, ಹೊರಟ್ಟಿ, ಕೆಳಗೂರು, ಸುಂಕಸಾಲೆ, ಭಾರತೀಬೈಲು ಹಾಗೂ ಸಬ್ಬೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ.
Advertisement
Advertisement
ಸುಮಾರು ಒಂದು ಗಂಟೆಗಳ ಕಾಲ ಸಾಧಾರಣವಾಗಿ ಉತ್ತಮ ಮಳೆ ಸುರಿದಿದೆ. ಹೀಗೆ ನಿರಂತರವಾಗಿ ತುಂತುರು ಮಳೆಯಾಗಿ ಸುರಿಯುವುದರಿಂದ ಭೂಮಿ ತಂಪಾಗಿ ಬೆಳೆಗೆ ಅನುಕೂಲವಾಗುತ್ತೆ ಎಂದು ರೈತರು ಹಾಗೂ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಎನ್.ಆರ್.ಪುರ, ಶೃಂಗೇರಿ, ಕೊಪ್ಪ ತಾಲೂಕಿನಲ್ಲೂ ಬೆಳಗ್ಗೆಯಿಂದ ಒಂದೇ ರೀತಿ ಜಿಟಿ-ಜಿಟಿ ಮಳೆಯಾಗುತ್ತಿದ್ದು ತಣ್ಣನೆಯ ಗಾಳಿ ಬೀಸುತ್ತಿದೆ.
Advertisement
Advertisement
ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣವಿದ್ದು, ಆಗಾಗ್ಗೆ ಸುರಿಯುತ್ತಿರೋ ತುಂತುರು ಮಳೆಯಿಂದ ಜನ ಮನೆಯಿಂದ ಹೊರ ಬರೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಅತ್ತ ಜೋರು ಮಳೆಯೂ ಅಲ್ಲ. ಇತ್ತ ನಿಲ್ಲುವುದು ಇಲ್ಲ ಎಂಬಂತೆ ಇಡೀ ದಿನ ಸಣ್ಣದಾಗಿ ತುಂತುರು ಮಳೆ ಜಿಲ್ಲಾದ್ಯಂತ ಸುರಿಯುತ್ತಲೇ ಇದೆ.
ಚಂಡಮಾರುತದಿಂದ ಗುಡುಗು-ಸಿಡಿಲಿನೊಂದಿಗೆ ಎರಡು ದಿನ ಭಾರೀ ಮಳೆಯಾಗುತ್ತೆಂದು ಇಂದು ಮತ್ತು ನಾಳೆ ಜಿಲ್ಲೆಯಲ್ಲಿ ರೆಡ್ ಅಲರ್ಡ್ ಘೋಷಿಸಲಾಗಿದೆ. ಮಳೆಯಿಂದ ಹೊಲಗದ್ದೆ-ತೋಟಗಳಿಗೆ ಹೋಗುವವರು ಬೆಳಗ್ಗೆಯಿಂದ ಮನೆಯಲ್ಲೇ ಈಗ ಮಳೆ ನಿಲ್ಲಬಹುದು ಎಂದು ಕಾಯುತ್ತಾ ಕುಳಿತ್ತಿದ್ದರು. ಇದೀಗ ರೈತರು ಹೊಲಗದ್ದೆ ತೋಟಗಳಿಗೆ ಹೋಗದಂತಾಗಿದೆ.