ಬಳ್ಳಾರಿ: ಜಿಲ್ಲೆಯ ಜಿಂದಾಲ್ ನಂಜು ಇದೇ ರೀತಿ ಮುಂದುವರಿದರೆ ಇಡೀ ಕಂಪನಿ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖೆ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಂದಾಲ್‍ನಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಬರದಿದ್ದರೆ ಜಿಂದಾಲ್ ಕಂಪನಿಯನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸುತ್ತಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನ ಕೈಗೊಂಡಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆ ಸೋಮವಾರ ತುರ್ತು ಸಭೆ ಕರೆಯಲಾಗಿದೆ. ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್ ಸಭೆಗೆ ಆಗಮಿಸಲಿದ್ದಾರೆ ಎಂದು ಆನಂದ್ ಸಿಂಗ್ ತಿಳಿಸಿದರು.
ದೇಶ ಲಾಕ್‍ಡೌನ್ ಮಾಡಿದಾಗಲೂ ಜಿಂದಾಲ್‍ಗೆ ಅವಕಾಶ ಕೊಟ್ಟಿದ್ದೇವೆ. ಹೀಗಾಗಿ ಜನ ನಮ್ಮ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಸರ್ಕಾರ ಅಗತ್ಯ ಬಿದ್ದರೆ ಜಿಂದಾಲ್ ಸಂಪೂರ್ಣ ಬಂದ್ ಮಾಡಲು ಸಿದ್ಧವಾಗಿದೆ ಎಂದಿದ್ದಾರೆ.