– ಪಂಚತಾರಾ ಹೋಟೆಲ್‍ಗಳಲ್ಲಿ ಸಿಡಿ ಗ್ಯಾಂಗ್ ಓಡಾಟ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಣದ ವಹಿವಾಟಿನ ಬಗ್ಗೆ ತನಿಖೆ ನಡೆಸಿ ಎಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳಿಗೆ ಕಾಂಗ್ರೆಸ್ ದೂರು ನೀಡಿದೆ.
ಕಾಂಗ್ರೆಸ್ ಮುಖಂಡ ಮನೋಹರ್ ಅವರು ಶಾಂತಿ ನಗರದಲ್ಲಿರುವ ಇಡಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿರೋ ಬಗ್ಗೆ ತನಿಖೆ ನಡೆಸಬೇಕು. ಅಕ್ರಮ ಹಣ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಸಿಡಿ ಪ್ರಕರಣದ ತನಿಖೆ ಮುಂದುವರಿದಿದೆ. ಸೋಮವಾರ ಸಂಜೆ ಬೆಳಗಾವಿಯ ಗೌಪ್ಯ ಸ್ಥಳದಲ್ಲಿ ಸಿಡಿ ಲೇಡಿ ಪೋಷಕರನ್ನು ಎಸ್‍ಐಟಿ ವಿಚಾರಣೆಗೆ ಒಳಪಡಿಸಿದೆ. ಆದರೆ ಅವರಿಂದ ಹೆಚ್ಚಿನ ಮಾಹಿತಿಯನ್ನು ಎಸ್‍ಐಟಿಗೆ ಪಡೆಯಲು ಆಗಿಲ್ಲ. ಕಳೆದ ವಾರ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ನೀಡಿದ ದೂರಿನ ಅಂಶಗಳನ್ನು ಬಿಟ್ಟು ಬೇರೇನನ್ನು ಪೋಷಕರು ಹೇಳಿಲ್ಲ. ಆದರೆ ಮಾರ್ಚ್ 5ರ ನಂತರ ಮಗಳು ನಮ್ಮ ಸಂಪರ್ಕಕ್ಕೆ ಬಂದಿಲ್ಲ. ಮಗಳು ಅಪಾಯದಲ್ಲಿದ್ದಾಳೆ. ಅವರನ್ನು ಆದಷ್ಟು ಬೇಗ ಕಾಪಾಡಿ ಎಂಬ ಮಾತನ್ನು ಮಾತ್ರ ಪೋಷಕರು ಹೇಳಿದ್ದಾರೆ ಎನ್ನಲಾಗಿದೆ.
ಇಂದು ಕೂಡ ಸಿಡಿ ಲೇಡಿ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಎಸ್‍ಐಟಿ ಐದನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಬನ್ನಿ ಎಂದು ಆಕೆಯ ವಾಟ್ಸಪ್ ನಂಬರ್, ಇ-ಮೇಲ್ ಖಾತೆಗೆ ನೋಟಿಸ್ ಕಳಿಸಿದ್ದಾರೆ. ಶಂಕಿತ ಸಿಡಿಕೋರರ ಸುಳಿವು ಪೊಲೀಸರಿಗೆ ಇನ್ನೂ ಕೂಡ ಸಿಕ್ಕಿಲ್ಲ. ದಿನಕ್ಕೊಂದು ಜಾಗ ಬದಲಿಸ್ತಿದ್ದಾರೆ. ಮೊನ್ನೆ ದೆಹಲಿ, ನಿನ್ನೆ ಲಖನೌನ ಪಂಚತಾರಾ ಹೋಟೆಲ್‍ನಲ್ಲಿ ಉಳಿದುಕೊಂಡಿದ್ರು. ಎಸ್‍ಐಟಿ ಸ್ಥಳಕ್ಕೆ ಹೋಗೋದ್ರೊಳಗೆ ಅವರು ಜಾಗ ಬದಲಿಸ್ತಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದ್ಕಡೆ ಸಿಡಿ ತನಿಖೆಯ ಪ್ರಗತಿಯ ಬಗ್ಗೆ ಗೃಹ ಸಚಿವರಿಗೆ ಎಸ್‍ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಮತ್ತು ಜಂಟಿ ಆಯುಕ್ತ ಸಂದೀಪ್ ಪಾಟೀಲ್ ವರದಿ ಒಪ್ಪಿಸಿದ್ದಾರೆ.