ಯಾದಗಿರಿ: ಕುಟುಂಬಸ್ಥರು ಜೀವ ಬೆದರಿಕೆ ಹಾಕುತ್ತಿದ್ದಾರೆ ರಕ್ಷಣೆ ಕೊಡಿ ಎಂದು ಜಾತಿ ಮೀರಿ ಪ್ರೀತಿಸಿ ವಿವಾಹವಾಗಿರುವ ಜೋಡಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಜಿಲ್ಲೆಯ ಸುರಪುರದ, ಪಾಳೆದಕೇರ ಓಣಿಯ ನಿವಾಸಿಗಳಾದ ತಿರುಪತಿ ಹಾಗೂ ಸರಸ್ವತಿ, ಕಳೆದ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಬಿಟ್ಟು ಇರದಷ್ಟು ಗಾಢವಾಗಿ ಪ್ರೀತಿಸುತ್ತಿದ್ದರು. ಈ ಇಬ್ಬರ ಪ್ರೀತಿಗೆ ಸರಸ್ವತಿ ಮನೆಯವರ ತೀವ್ರ ವಿರೋಧ ಸಹ ಇತ್ತು. ಹೀಗಾಗಿ ಅಕ್ಟೋಬರ್ 16ರಂದು ಮನೆ ಬಿಟ್ಟು ಹೋಗಿ, ಕಲಬುರಗಿ ಜಿಲ್ಲೆಯ ಸೇಡಂ ನಲ್ಲಿ ಮದುವೆಯಾಗಿದ್ದಾರೆ.
ಇದರಿಂದಾಗಿ ಕೆಂಡಮಂಡಲವಾಗಿರುವ ಸರಸ್ವತಿ ಕುಟುಂಬಸ್ಥರು, ತಿರುಪತಿ ಮನೆಯವರಿಗೆ ತೊಂದರೆ ಕೊಟ್ಟು, ಜೀವ ಬೆದರಿಕೆ ಹಾಕುತ್ತಿದ್ದಾರಂತೆ. ಹೀಗಾಗಿ ಈ ನವ ಜೋಡಿ ತಮಗೆ ಮತ್ತು ತಿರುಪತಿಯವರ ಕುಟುಂಬಕ್ಕೆ ರಕ್ಷಣೆ ನೀಡುವಂತೆ, ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಮೊರೆ ಹೋಗಿದ್ದಾರೆ. ಈ ಇಬ್ಬರ ಪ್ರೀತಿಗೆ ಜಾತಿಯೇ ದೊಡ್ಡ ವಿಲನ್ ಆಗಿದೆ. ತಿರುಪತಿ ದಲಿತ ಸಮುದಾಯದ ಯುವಕ, ಸರಸ್ವತಿ ಮೇಲ್ಜಾತಿಯ ಯುವತಿ. ಹೀಗಾಗಿ ಸರಸ್ವತಿ ಮನೆಯವರು ತಿರುಪತಿ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಸಹ ಹಾಕುತ್ತಿದ್ದಾರೆ ಎಂದು ಜೋಡಿ ಆರೋಪಿಸಿದೆ.
ಸರಸ್ವತಿ ಮತ್ತು ತಿರುಪತಿ ಸ್ವ ಇಚ್ಛೆಯಿಂದಲೇ ಸರ್ಕಾರದ ನೀತಿ ನಿಯಮಗಳಂತೆ ಮದುವೆಯಾಗಿದ್ದಾರೆ. ಹೀಗಾಗಿ ಈ ಇಬ್ಬರಿಗೆ ಮತ್ತು ತಿರುಪತಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.