ಭುವನೇಶ್ವರ: ಸೆಲ್ಫಿ ಕ್ಲಿಕ್ಕಿಸಿ, ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ಪ್ರದೇಶದ ದೃಶ್ಯ ತೋರಿಸಲು ಹೋಗಿ 23 ವರ್ಷದ ಮೆಡಿಕಲ್ ವಿದ್ಯಾರ್ಥಿಯೊಬ್ಬ ದುರ್ಮರಣಕ್ಕೀಡಾದ ಘಟನೆ ಒಡಿಶಾದ ದಿಯೋಘರ್ ಎಂಬಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಶುಭಂ ಪ್ರಸಾದ್ ಎಂದು ಗುರುತಿಸಲಾಗಿದ್ದು. ಈತ ಉತ್ತರಪ್ರದೇಶದ ಪ್ರಯಾಗ್‍ರಾಜ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಪ್ರಧಾನ್‍ಪತ್ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ. ಕೂಡಲೇ ಒಡಿಆರ್ ಎಎಫ್ ತಂಡ ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಹೊರತೆಗೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಪ್ರಸಾದ್ ಎಂದಿನಂತೆ ಗುರುವಾರ ಬೆಳಗ್ಗೆ ವಾಕಿಂಗ್ ಹೋಗಿದ್ದಾರೆ. ಆ ಬಳಿಕ ಜಲಪಾತ ವೀಕ್ಷಿಸಿಲು ತೆರಳಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಜಲಪಾತದ ತುತ್ತು ತುದಿಗೆ ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾರೆ. ಹೀಗೆ ಹೋದವರು ವಾಪಸ್ ಬರದೇ ಇದ್ದಾಗ ಕುಟುಂಬ ಹುಡುಕಾಟ ನಡೆಸಲು ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತ ಉತ್ತರಪ್ರದೇಶದಲ್ಲಿರುವ ಪ್ರಸಾದ್ ಗೆಳೆಯನೊಬ್ಬನಿಗೆ ಕರೆ ಮಾಡಿದಾಗ ಆತ, ಪ್ರಸಾದ್ ಅತಿ ಎತ್ತರ ಪ್ರದೇಶದಲಿ ನಿಂತು ವಿಡಿಯೋ ಕಾಲ್ ಮಾಡಿದ್ದ. ಈ ಮೂಲಕ ಅಲ್ಲಿನ ರಮಣೀಯ ದೃಶ್ಯಗಳನ್ನು ತೋರಿಸಿದ್ದ. ಆ ಬಳಿಕ ಆತ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ತಿಳಿಸಿದ್ದಾನೆ.
ಕೂಡಲೆ ಕುಟುಂಬಸ್ಥರು ಹಾಗೂ ಒಡಿಆರ್ ಎಎಫ್ ತಂಡ ಸ್ಥಳಕ್ಕೆ ದೌಡಾಯಿಸಿತು. ಶುಕ್ರವಾರ ಬೆಳಗ್ಗೆ ಪ್ರಸಾದ್ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.
ಘಟನೆ ಸಂಬಂಧ ದಿಯೋಘರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.