ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿ ಕಳೆದ ನಾಲ್ಕು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ತೀವ್ರ ಉಸಿರಾಟದ ತೊಂದರೆ ಎದುರಾಗಿದ್ದರಿಂದ ಶಶಿಕಲಾ ಅವರನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
Advertisement
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಅವರ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದು, ಇದೇ ತಿಂಗಳ 27ರಂದು ಜೈಲಿನಿಂದ ಶಶಿಕಲಾ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು. ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರು ಜೈಲಿನಿಂದ ಬಿಡುಗಡೆ ಆಗುತ್ತಿರುವ ಚಿನ್ನಮ್ಮ ಶಶಿಕಲಾ ಅವರನ್ನು ಭರ್ಜರಿಯಾಗಿ ಬರಮಾಡಿಕೊಳ್ಳಲು ಸಕಲ ರೀತಿಯಲ್ಲಿ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದರು.
Advertisement
Advertisement
ಕಳೆದ ನಾಲ್ಕು ವರ್ಷಗಳಿಂದ ಅಕ್ರಮ ಆಸ್ತಿ ಗಳಿಕೆ ಆರೋಪದ ಅಡಿಯಲ್ಲಿ ಶಿಕ್ಷೆ ಅನುಭವಿಸಿ ಈಗ ಬಿಡುಗಡೆಯಾಗುತ್ತಿರುವ ಹಿನ್ನೆಲೆ ತಮಿಳುನಾಡಿನ ರಾಜಕೀಯ ವಲಯದಲ್ಲೂ ಸಹ ಬಾರಿ ಸಂಚಲನ ಸೃಷ್ಟಿಯಾಗಿತ್ತು. ಆದ್ರೆ ಇನ್ನೂ ಬಿಡುಗಡೆಗೆ ಇನ್ನೂ ಕೆಲವೇ ದಿನಗಳ ಬಾಕಿ ಇರುವಾಗಲೇ ಬುಧವಾರ ರಾತ್ರಿಯಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇಂದು ಕೂಡ ಆರೋಗ್ಯ ಸುಧಾರಿಸದೆ ಜೈಲಿನ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ಜೈಲಿನ ವೈದ್ಯೆ ಉಮಾ ನೇತೃತ್ವದ ನಾಲ್ವರು ವೈದ್ಯರ ತಂಡ ತಪಾಸಣೆಗಳು ನಡೆಸಿದ್ರು. ಆದ್ರೆ ತೀವ್ರ ಉಸಿರಾಟದ ತೊಂದರೆ ಹೆಚ್ಚಾದ ಹಿನ್ನೆಲೆ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಿ ಐಸಿಯನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಬಿಡುಗಡೆ ಆಗಲಿರುವ ಶಶಿಕಲಾ ಅವರನ್ನು ಆಹ್ವಾನಿಸಲು 15 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಶಶಿಕಲಾ ಆಪ್ತರು ಹಾಗೂ ಬೆಂಬಲಿಗರು ಜೈಲಿನಿಂದ ಮೆರವಣಿಗೆ ಮೂಲಕ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದರು. ಆದರೆ ಇದಕ್ಕೆ ಭದ್ರತೆಯ ಕಾರಣದಿಂದ ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ರಾಜ್ಯದ ಗಡಿ ಅತ್ತಿಬೆಲೆ ಮುಗಿದ ನಂತರ ಮೆರವಣಿಗೆ ನಡೆಸಲು ಅಭಿಮಾನಿಗಳು ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು,ಇದರ ನಡುವೆ ಚಿನ್ನಮ್ಮ ಆರೋಗ್ಯದಲ್ಲಿ ಏರುಪೇರಾಗಿ ಇರುವುದರಿಂದಾಗಿ ಅಭಿಮಾನಿಗಳಲ್ಲಿ ತೀವ್ರ ಆತಂಕ ಎದುರಾಗಿದೆ. ಇನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ಶಶಿಕಲಾ ಅವರನ್ನು ಬೌರಿಂಗ್ ಅಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ದಾಖಲು ಮಾಡಿ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಮೂರು ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ಮಾಡಲಾಗುತ್ತಿದ್ದು, ಉಸಿರಾಟದ ಸಮಸ್ಯೆ, ಜ್ವರ, ಕಫ ಇರುವುದರಿಂದ ತುರ್ತು ಪರೀಕ್ಷೆಯನ್ನು ನಡೆಸಲು ಪರಪ್ಪನ ಅಗ್ರಹಾರ ಜೈಲು ವೈದ್ಯರ ರಿಪೋರ್ಟ್ ಪರಿಶೀಲಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ತಮಿಳುನಾಡು ರಾಜಕಾರಣದಲ್ಲಿ ಸಂಚಲವನ್ನು ಮಾಡಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಬಿಡುಗಡೆಗೆ ಏಳು ದಿನ ಬಾಕಿ ಇರುವಾಗಲೇ ಶಶಿಕಲಾ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಚಿನ್ನಮ್ಮ ಆದಷ್ಟು ಬೇಗ ಸುಧಾರಿಸಿ ಹೊರಬರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.