ಮುಂಬೈ: ನಟಿ ಕಂಗನಾ ರಣಾವತ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಕಾಲಿವುಡ್ ನಟಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ ಸಿನಿಮಾದಲ್ಲಿ ಅಭಿನಯಿಸಿದ್ದ ಕಂಗನಾ ಇದೀಗ ಮತ್ತೊರ್ವ ರಾಜಕಾರಣಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಕಂಗನಾ ಇದೀಗ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಂಗನಾ, ಈ ಚಿತ್ರವು ಕೇವಲ ಇಂದಿರಾ ಗಾಂಧಿಯವರ ಜೀವನ ಚರಿತ್ರೆಯನ್ನು ಮಾತ್ರ ಹೊಂದಿಲ್ಲ. ಬದಲಾಗಿ ಆಪರೇಷನ್ ಬ್ಲೂ ಸ್ಟಾರ್ ಮತ್ತು 1997 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಜೊತೆಗೆ ಭಾರತೀಯ ರಾಜಕೀಯ ಇತಿಹಾಸದ ಮಹತ್ವ ಕ್ಷಣಗಳನ್ನು ಚಿತ್ರ ಒಳಗೊಂಡಿದೆ ಎಂದು ತಿಳಿಸಿದರು.
ಸದ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಕೆಲಸಗಳು ನಡೆಯುತ್ತಿದ್ದು, ಸ್ಕ್ರಿಪ್ಟ್ ಕೆಲಸ ಅಂತಿಮ ಹಂತದಲ್ಲಿದೆ. ಈ ಚಿತ್ರ ಇಂದಿರಾ ಗಾಂಧಿಯವರ ಜೀವನ ಚರಿತ್ರೆಯಲ್ಲ. ಇದೊಂದು ಕಂಪ್ಲೀಟ್ ಪೊಲಿಟಿಕಲ್ ಡ್ರಾಮಾ ಹೊಂದಿದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಸಿನಿಮಾ ಪ್ರಸ್ತುತ ಭಾರತದ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಯುವ ಪೀಳಿಗೆಗೆ ಸಹಾಯಕವಾಗುತ್ತದೆ ಎಂದಿದ್ದಾರೆ.
ಇದೀಗ ಕಂಗನಾ ರಣವತ್ ಇಂದಿರಾ ಗಾಂಧಿ ಪಾತ್ರಕ್ಕಾಗಿ ಎದರು ನೋಡುತ್ತಿದ್ದು, ಅಂದಿನ ಭಾರತೀಯ ಇತಿಹಾಸದ ಅಪ್ರತಿಮ ನಾಯಕರಾದ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಹಲವಾರು ರಾಜಕೀಯ ನಾಯಕರ ಹೆಜ್ಜೆಗುರುತು ಸಿನಿಮಾದಲ್ಲಿದೆ ಎಂದಿದ್ದಾರೆ. ಹಾಗಾಗಿ ಅನೇಕ ಪ್ರಮುಖ ನಟರು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಾಯಿ ಕಬೀರ್ ನಿರ್ದೇಶನದ ಈ ಚಿತ್ರಕ್ಕೆ ಟೈಟಲ್ ನಿಗದಿಯಾಗಿಲ್ಲ. ಮುಂಬರುವ ದಿನಗಳಲ್ಲಿ ಹೆಸರು ಪ್ರಕಟವಾಗುವ ಸಾಧ್ಯತೆಯಿದೆ.