ಬೆಂಗಳೂರು: ಇಂದು ಬೆಳಗ್ಗೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಗೆ ಹಾಲು ಹಾಕಲು ಬಂದ ವ್ಯಕ್ತಿಯೂ ಸಹ ಒಳಗೆ ಲಾಕ್ ಆಗಿದ್ದಾರೆ. ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟಿವಿಎಸ್ ಹೊರಗಡೆಯೇ ನಿಂತಿದೆ.
ಇಂದು ಬೆಳಗ್ಗೆ ಶಾಸಕರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಹಾಲು ಹಾಕುವ ವ್ಯಕ್ತಿ ಸಹ ಇದ್ದರು. ಹಾಗಾಗಿ ದಾಳಿ ವೇಳೆ ಮನೆಯಲ್ಲಿದ್ದ ಕಾರಣ ಹೇಳಿ ವ್ಯಕ್ತಿಯನ್ನು ಮನೆಯಲ್ಲಿ ಕೂರಿಸಿಕೊಂಡಿದ್ದಾರೆ. ಶಾಸಕರ ಮನೆ, ಕಚೇರಿ ಸೇರಿದಂತೆ 14 ಕಡೆ ಏಕಕಾಲದಲ್ಲಿ ಇಡಿ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದರು.
ಇಡಿ ದಾಳಿ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಧೃವ ನಾರಾಯಣ್ ಸೇರಿದಂತೆ ಹಲವರು ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ. ಇತ್ತ ಶಾಸಕ ನಿವಾಸದ ಮುಂದೆ ಜಮೀರ್ ಅಹ್ಮದ್ ಅವರ ಅಭಿಮಾನಿಗಳು ಸೇರಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರು ಐಎಂಎ ಗೋಲ್ಡ್‍ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿರುವ ಮಾಹಿತಿ ಹೊರಬಿದ್ದಿದೆ. ಮಗಳ ಮದುವೆಯ ಸಂದರ್ಭದಲ್ಲಿ ಜಮೀರ್ ಅವರು ಮನ್ಸೂರ್ ಬಳಿ 9 ಕೋಟಿ ಹಣ ಪಡೆದಿದ್ದಾರೆ. ಉಳಿದಿದ್ದ ಹಣವನ್ನು ಚಿನ್ನದ ರೂಪದಲ್ಲಿ ಪಡೆದುಕೊಂಡಿದ್ದರು. ಐಎಂಎ ಗೋಲ್ಡ್‍ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಜಮೀರ್, ಬಡ್ಡಿಯ ರೂಪದಲ್ಲಿಯೂ ಕೂಡ ಹಣ ಪಡೆದುಕೊಂಡಿದ್ದರೆಂಬ ಮಾಹಿತಿ ತಿಳಿದುಬಂದಿದೆ.