ಮಂಡ್ಯ: ಜನ ಬಯಸಿದರೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭಿಲಾಷೆಯನ್ನು ನಟ ಅಭಿಷೇಕ್ ಅಂಬರೀಶ್ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನಹಳ್ಳಿ ಗ್ರಾಮದಲ್ಲಿ ಅಂಬರೀಶ್ ಅಭಿಮಾನಿಗಳು ವಿತರಿಸುತ್ತಿದ್ದ ಫುಡ್‍ಕಿಟ್ ಕಾರ್ಯಕ್ರಮಕ್ಕೆ ಬಂದಿದ್ದ ನಟ ಅಭಿಷೇಕ್ ಅಂಬರೀಶ್ ಫುಡ್ ವಿತರಣೆ ಮಾಡಿದರು. ಬಳಿಕ ಅಭಿಮಾನಿಯ ಮನೆಯಲ್ಲಿ ಕುಳಿತಿದ್ದ ವೇಳೆ ಮಾತನಾಡಿದ ಅವರು, ಮುಂದೆ ರಾಜಕೀಯ ಪ್ರವೇಶ ಮಾಡುತ್ತಿರಾ ಎಂದು ಕೇಳಿದ ಪ್ರಶ್ನೆಗೆ ಭವಿಷ್ಯದಲ್ಲಿ ಏನು ಬೇಕಾದರೂ ಬದಲಾವಣೆಯಾಗಬಹುದು. ಜನ ಬಯಸಿದರೆ ಖಂಡಿತ ನಾನು ರಾಜಕೀಯಕ್ಕೆ ಬರುತ್ತೇನೆ. ಮದ್ದೂರಿಗಾಗಲಿ, ಮಂಡ್ಯಗಾಗಲಿ ಜಿಲ್ಲೆಯಲ್ಲಿರುವ ಏಳು ಕ್ಷೇತ್ರಗಳಿಗೂ ಒಳ್ಳೆಯ ಎಂಎಲ್‍ಎಗಳು ಸಿಗಬೇಕು. ಒಳ್ಳೆಯ ಜನಪ್ರತಿನಿಧಿಗಳು ಸಿಗಬೇಕು ಯಾರ ಮನೆಯವರು ನನಗೆ ಬೇಕಾದವರು ಅಂತಲ್ಲ ಎಂದರು.
ಸಿಎಂ ಬದಲಾವಣೆಯಾಗುತ್ತಾರೆ ಎಂದು ಯಾರಿಗೂ ಗೊತ್ತಿರಲಿಲ್ಲ, ಯಾರಿಗಾದರೂ ಗೋತ್ತಿತ್ತಾ ಎಂದು ಅಭಿಷೇಕ್ ಕೇಳಿದರು. ಈ ವೇಳೆ ಅಭಿಮಾನಿಯೊಬ್ಬ ಬದಲಾವಣೆ ಆಗುತ್ತಾರೆ ಅಂತಾ ಗೊತ್ತಿದ್ರು ಬೊಮ್ಮಾಯಿ ಆಗ್ತಾರೆ ಅಂತಾ ಗೊತ್ತಿರಲಿಲ್ಲ ಎಂದರು. ನೋಡಿ ಭವಿಷ್ಯದಲ್ಲಿ ಏನು ಬೇಕಾದರು ಆಗಬಹದು, ಜನ ಬಯಸಿದರೆ ನಾನು ರಾಜಕೀಯಕ್ಕೆ ಬರುತ್ತೇನೆ ಎಂದು ಹೇಳಿದರು. ಈ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆಯನ್ನು ಅಭಿಷೇಕ್ ನೀಡಿದ್ದಾರೆ. ಇದನ್ನೂ ಓದಿ: ರಾಕಿಂಗ್ ಪುತ್ರಿಯ ಸಂದೇಶ