ಚಿತ್ರದುರ್ಗ: ಭೂಮಿಯ ಮೇಲೆ ಜನಸಂಖ್ಯೆ ಹೆಚ್ಚಾಗಿ, ಪ್ರಕೃತಿ ವಿಕೋಪ, ಹಿಂಸಾಚಾರ, ಯುದ್ಧ, ಸಂಘರ್ಷ ಇನ್ನಿತರ ಪ್ರಮುಖ ಕಾರಣಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಹೇಳಿದ್ದಾರೆ.
Advertisement
ನಗರದ ತರಳಬಾಳು ನಗರದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ‘ವಿಶ್ವ ನಿರಾಶ್ರಿತರ ದಿನ’ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಾಶ್ರಿತ ಜನರು ಬದುಕುವ ದಾರಿ ಹುಡುಕಲು ವಲಸೆ ಹೋಗುತ್ತಾರೆ. ಸಣ್ಣಪುಟ್ಟ ರಾಷ್ಟ್ರಗಳಿಂದ ದೊಡ್ಡ ದೇಶಗಳಿಗೆ ಜನರು ವಲಸೆ ಹೋಗುತ್ತಾರೆ. ಮೂಲಭೂತ ಸೌಕರ್ಯ ವಂಚಿತರಾದ ನಿರಾಶ್ರಿತರ ಸಮಸ್ಯೆಗೆ, ಪುನರ್ವಸತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ, ಪ್ರತಿ ವರ್ಷ ವಿಶ್ವ ನಿರಾಶ್ರಿತರ ದಿನ ಆಚರಿಸಲಾಗುತ್ತಿದೆ ಎಂದರು.
Advertisement
ಜನರು ವಲಸೆಯಿಂದ ಬದುಕುವ ಮೂಲಭೂತ ಸೌಕರ್ಯ, ಹಕ್ಕುಗಳು ಕಳೆದುಕೊಳ್ಳುತ್ತಾರೆ. ಆಹಾರ, ಬಟ್ಟೆ, ಬರೆ, ಔಷಧಗಳಿಲ್ಲದೇ ನರಳುತ್ತಾರೆ. ಅಲ್ಲದೆ ಅಮಾಯಕ ನಿರಾಶ್ರಿತರನ್ನು ಕಾನೂನುಬಾಹಿರ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ನಿರಾಶ್ರಿತರನ್ನು ರಕ್ಷಿಸಿ, ಅವರಿಗೆ ಸಕಲ ಸುರಕ್ಷತೆ ಒದಗಿಸಿ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ನಿರಾಶ್ರಿತರಿಗೂ ಅಗತ್ಯ ಸೌಲಭ್ಯಗಳನ್ನು ನೀಡಿ, ಮಾನವೀಯತೆಯಿಂದ ಅವರಿಗೆ ಆಶ್ರಯ ಸಾಮಗ್ರಿಗಳನ್ನು ಒದಗಿಸಿ, ಸಮಾಜದಲ್ಲಿ ಇತರರಂತೆ ಬದುಕುವ ಹಕ್ಕು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
Advertisement
Advertisement
ಕಾರ್ಯಕ್ರಮದಲ್ಲಿ ನಿರಾಶ್ರಿತರಂತೆ ವೇಷ ಭೂಷಣ ತೊಟ್ಟು, ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಎಲ್ಲೂ ಹೋಗದಿರಿ ಎಂಬ ಗೀತೆಯನ್ನು ಹಾಡಿ ಜನರನ್ನ ಜಾಗೃತಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಂಶುಲ್, ಹೆಚ್.ಎಸ್.ರಚನ, ಹೆಚ್.ಎಸ್.ಪ್ರೇರಣ, ವೇನಿಲಾ, ಜಾನವಿ, ಶ್ರೀನಿವಾಸ, ಗೀತ, ಶಶಿ ಹಾಜರಿದ್ದರು.