ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧವಾಗ್ತಿದೆ. ಇದರ ಬೆನ್ನಲ್ಲೇ ಜನವರಿ 15ರ ಒಳಗೆ ಜೆಡಿಎಸ್ ನ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡೋದಾಗಿ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಪಿ ಭವನದಲ್ಲಿ ಪಕ್ಷ ಸಂಘಟನೆ ಕುರಿತು ಜೆಪಿ ಭವನದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಕುಮಾರಸ್ವಾಮಿ ಅವರು, ಒಂದು ವಾರಗಳ ಕಾಲ ಪಕ್ಷದ ಜಿಲ್ಲಾವಾರು ಸಂಘಟನೆ ಸಭೆ ಕರೆದಿದ್ದೇನೆ. ಕೋವಿಡ್ ಇನ್ನೂ ಇದೆ. ಹೀಗಾಗಿ ನಾನು ಜಿಲ್ಲೆಗಳಿಗೆ ಹೋಗಲಾಗುತ್ತಿಲ್ಲ. ಮುಂದಿನ ಐದು ದಿನಗಳ ಕಾಲ ಸಂಘಟನೆ ಬಗ್ಗೆ ಚರ್ಚೆ ಮಾಡ್ತೀವಿ. ಆಷಾಡ ಮಾಸದ ನಂತರ ಜಿಲ್ಲಾವಾರು ಪ್ರವಾಸ ಮಾಡಲಿದ್ದೇನೆ. ಮುಂದಿನ ಅಸೆಂಬ್ಲಿ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ತಿಳಿಸಲಿದ್ದೇವೆ ಅಂತ ತಿಳಿಸಿದರು.
ರಾಷ್ಟ್ರೀಯ ಪಕ್ಷ ನಡೆಸಬೇಕಾದ್ರೆ ದೆಹಲಿಯಿಂದ ಇಲ್ಲಿಗೆ ಉಸ್ತುವಾರಿ ಕಳಿಸ್ತಾರೆ. ಬಿಜೆಪಿ, ಕಾಂಗ್ರೆಸ್‍ನಿಂದ ಉಸ್ತುವಾರಿ ಬರ್ತಾರೆ. ಅದರ ಉದ್ದೇಶ ಏನು. ಕರ್ನಾಟಕ ರಾಜ್ಯ ಸಂಪತ್ಬರಿತ ರಾಜ್ಯ. ಇಲ್ಲಿರೋ ಸಂಪತ್ತನ್ನು ಲೂಟಿ ಮಾಡಲು ಬರ್ತಾರೆ. ಪಾಳೆಗಾರಿಕೆ ನಡೆಸೋ ಕಥೆ ಇದು. ಇಲ್ಲಿರೋ ಸಂಪತ್ತನ್ನು ಚುನಾವಣೆ ನಡೆಸುವ ಸ್ಥಳಗಳಿಗೆ ಕಳಿಸೋದು. ಆದ್ರೆ ನಾವು ಹಾಗಲ್ಲ, ಕೋವಿಡ್, ಶಿಕ್ಷಣ, ಕೃಷಿ, ಯುವಕರಿಗೆ ಉದ್ಯೋಗ ಸೃಷ್ಟಿ ವಿಚಾರ ಬಗ್ಗೆ ಚರ್ಚೆ ಮಾಡುತ್ತೇವೆ. ನಾನು ಕೃಷಿಯಲ್ಲಿ ತೊಡಗಿಕೊಂಡಿದ್ರೂ, ಪಕ್ಷ ಸಂಘಟನೆ ಮಾಡುವಲ್ಲಿ ತೊಡಗಿದ್ದೇನೆ. ಹೊಸದೊಂದು ಬದಲಾವಣೆಗೆ ಪ್ರಾದೇಶಿಕ ಪಕ್ಷದ ಪಾತ್ರದ ಬಗ್ಗೆ ಜನರಿಗೆ ತಿಳಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಸಿಗರೇ ಶನಿವಾರ, ಭಾನುವಾರ ನಂದಿಬೆಟ್ಟಕ್ಕೆ ಬರಬೇಡಿ
ಕೇಂದ್ರ ಜಲಶಕ್ತಿ ಸಚಿವರು ರಾಜ್ಯಕ್ಕೆ ಬಂದಿದ್ದ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜಲ ಮಿಷನ್ ಯೋಜನೆ ಬಗ್ಗೆ ತಿಳಿಸಲು ಕೇಂದ್ರ ಸಚಿವರು ಇಲ್ಲಿಗೆ ಬಂದಿದ್ರು. ಇಲ್ಲಿ ನಡೆಯೋ ಸಭೆಗೆ ಈಶ್ವರಪ್ಪ ಅವರು ಹೋಗೋದೇ ಇಲ್ಲ. 99 ಲಕ್ಷ ಕುಟುಂಬಕ್ಕೆ ನೀರು ಪೂರೈಸೋ ಬಗ್ಗೆ ಹೇಳಿದ್ರು. ಅವರು ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ಬಂದಿಲ್ಲ. ಮಹದಾಯಿ, ಮೇಕೇದಾಟು ವಿಚಾರ ಸಮಗ್ರವಾಗಿ ಚರ್ಚೆ ನಡೆಸಿಲ್ಲ. ಅವರು ಟೋಪಿ ಹಾಕಿದ್ದಾರೆ ಅಷ್ಟೆ. ಜನತೆ ಮುಂದೆ ಹಲವಾರು ರೀತಿಯ ಕಾರ್ಯಕ್ರಮ ರೂಪುರೇಷೆ ನಡೆಸಲು ನಾವು ನಿರ್ಧಾರ ಮಾಡಿದ್ದೇವೆ. ಯಾವ ಸಂದರ್ಭದಲ್ಲಿ ಜನರ ಹತ್ತಿರ ಹೋಗಲು ಏನು ಮಾಡಬೇಕೋ ಮಾಡುತ್ತೇವೆ. ನಮ್ಮ ಪಕ್ಷ ಜನರಿಗಾಗಿಯೇ ಇರೋ ಪಕ್ಷ. ಜನವರಿ 15ರ ಒಳಗೆ ಕನಿಷ್ಠ 150 ಜನ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸ್ವತಂತ್ರ ಅಧಿಕಾರಕ್ಕೆ ಬರೋದೇ ನನ್ನ ಗುರಿ. ಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿರೋದು. 2018ರಲ್ಲಿ ಸಿಎಂ ಆಗಿದ್ದಾಗ ಯಾವ ಯೋಜನೆಗೆ ಚಾಲನೆ ನೀಡಿದ್ದೆನೋ, ಅದನ್ನೇ ಈಗ ಮುಂದುವರೆಸುತ್ತಿದ್ದಾರೆ. ಭೂ ಸ್ವಾಧೀನ ಕ್ಲಿಯರೆನ್ಸ್ ಮಾಡಲು ಅನುಮತಿ ನೀಡಲಾಗಿತ್ತು. ಈವರೆಗೂ ಔಟರ್ ರಿಂಗ್ ರೋಡ್ ಪರಿಸ್ಥಿತಿ ಏನಾಗಿದೆ ಅಂತ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಕಾಂಗ್ರೆಸ್, ಬಿಜೆಪಿ ಸಿಎಂ ಕಿತ್ತಾಟಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಎಲ್ಲಾ ಪಕ್ಷಗಳು ಅಧಿಕಾರಕ್ಕೆ ಬರೋದಾಗಿ ಹೇಳ್ತಿದ್ದಾರೆ. ಯಡಿಯೂರಪ್ಪ ಅವರು ಹೇಳಿದ್ದರು. ಸಿದ್ದರಾಮಯ್ಯ ಕೊನೆ ಬಾರಿ ಚುನಾವಣೆ ಅಂದ್ರು. ಈಗ ಅವರು ಕನಸು ಕಾಣ್ತಿದ್ದಾರೆ. ಕಾಂಗ್ರೆಸ್ ಗೆ ಅವರು ದುಡಿಮೆಗಿಂತ, ನಾನೇ ಸಿಎಂ ಅಂತ ಹೇಳಿಕೊಂಡು ಒಬ್ಬೊಬ್ಬರ ಹೆಸರು ಸೇರಿಸುತ್ತಾ ಬಂದಿದ್ದಾರೆ. ದೇಶಕ್ಕೆ ಮಾದರಿಯಾಗೋ ಕೆಲಸ ಮಾಡಬೇಕು. ನನಗೆ ಅಧಿಕಾರದ ಆಸೆ ಇಲ್ಲ. ಎಲ್ಲವನ್ನು ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ. ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲ ಇದೆ. ಕಾಂಗ್ರೆಸ್ ಈಗಲೇ ಅಧಿಕಾರದ ಬಗ್ಗೆ ಕನಸು ಕಾಣಲು ಶುರು ಮಾಡಿದೆ. ಒಂದೊಂದು ಸಲ ಒಬ್ಬೊಬ್ಬರು ನಾನೇ ಸಿಎಂ ಅನ್ನುತ್ತಿದ್ದಾರೆ. 130 ಸ್ಥಾನಗಳನ್ನು ಗಳಿಸಿದ ಕಾಂಗ್ರೆಸ್ ಪರಿಸ್ಥಿತಿ ಆಮೇಲೆ ಏನಾಯಿತು.? ಅಂತ ಕಾಂಗ್ರೆಸ್ ನಾಯಕರ ವರ್ತನೆಗೆ ಕುಮಾರಸ್ವಾಮಿ ವ್ಯಂಗ್ಯವಾಡಿದರು.